“ಮಂಡ್ಯದಲ್ಲಿ 3 ದಿನ ಸಿಲುಕಿದ್ದ ಕಾಡಾನೆ ರಕ್ಷಣೆ: ಅರಣ್ಯ ಸಿಬ್ಬಂದಿಯಿಂದ ರೋಚಕ ಕಾರ್ಯಾಚರಣೆ ಯಶಸ್ವಿ”.

ಮಂಡ್ಯಜಿಲ್ಲೆಯ ಶಿವನಸಮುದ್ರದ ಬಳಿಯ ನಾಲೆಯಲ್ಲಿ ಮೂರು ದಿನ ಸಿಲುಕಿ ಪರದಾಡಿದ್ದ ಕಾಡಾನೆಯನ್ನು ಸತತ ಕಾರ್ಯಾಚರಣೆ ಬಳಿಕ ಇದೀಗ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕ್ರೇನ್ ಮೂಲಕ ನಾಲೆಯಿಂದ ಕಾಡಾನೆಯನ್ನು ಮೇಲೆತ್ತಿದ್ದಾರೆ. ಸದ್ಯ ಚಿಕಿತ್ಸೆ ನೀಡಿ ಹಲಗೂರು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.

ಆಹಾರ ಅರಸಿ ಬಂದು ನಾಲೆಗೆ ಬಿದ್ದ ಕಾಡಾನೆ

10 ರಿಂದ 15 ವರ್ಷ ಪ್ರಾಯದ ಕಾಡಾನೆ ಆಹಾರ ಅರಸಿ ಬಂದು ಜಿಲ್ಲೆಯ ಮಳವಳ್ಳಿ ತಾಲೂಕಿನ‌ ಶಿವವಸಮುದ್ರ ಬಳಿಯ ನಾಲೆಗೆ ಬಿದ್ದಿದೆ. ಖಾಸಗಿ ಪವರ್ ಸ್ಟೇಷನ್​ಗೆ ನೀರು ಸರಬರಾಜು ಮಾಡುವ ನಾಲೆಯಲ್ಲೇ 3 ದಿನದಿಂದ ಸಿಲುಕಿತ್ತು. ಸ್ಥಳದಲ್ಲೇ ಬೀಡುಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಾಡಾನೆಗೆ ಆಹಾರ ನೀಡಿದ್ದರು.

ನಾಲೆಯಿಂದ ಆನೆಯನ್ನ ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ನಿನ್ನೆ ಪ್ರಯತ್ನ ಪಟ್ಟಿದ್ದರು. ಆದರೆ ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಚರಣೆಗೆ ತೊಡಕಾಗಿತ್ತು. ಇಂದು ನಾಲೆಯ ನೀರನ್ನು ತಗ್ಗಿಸಿ ಕಾರ್ಯಚರಣೆ ಮಾಡಲಾಗಿದೆ.

ಮೊದಲಿಗೆ ಪಟಾಕಿ ಸಿಡಿಸಿ ತಾನಾಗಿಯೇ ಕಾಡಾನೆ ಮೇಲಕ್ಕೆ ಬರುವಂತೆ ಮಾಡಲಾಗಿದೆ. ಆದರೆ ಅದು ಸಾಧ್ಯವಾಗಿಲ್ಲ. ಇನ್ನು ಅರಣ್ಯ ಇಲಾಖೆ ಇಟ್ಟಿರುವ ಕಂಟೇನರ್​​ನ್ನು ಕಾಡಾನೆ ದೂಡಿದೆ. ಬಳಿಕ ಅರಿವಳಿಕೆ ಚುಚ್ಚುಮದ್ದು ನೀಡಲಾಗಿದೆ. ಚುಚ್ಚುಮದ್ದು ನೀಡುತ್ತಿದ್ದಂತೆ ಕಾಡಾನೆ ಕೂಗಾಡಿ ಆರ್ಭಟಿಸಿದೆ.

ಕ್ರೇನ್ ಮೂಲಕ ಕಾಡಾನೆ ರಕ್ಷಣೆ

2 ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಕಾಡಾನೆ ಪ್ರಜ್ಞೆತಪ್ಪಿ ನಾಲೆಯಲ್ಲೇ ಕುಸಿದುಬಿದ್ದಿದೆ. ಬಳಿಕ ಸಿಬ್ಬಂದಿ ನಾಲೆಗೆ ಇಳಿದು ಕಾಡಾನೆಯ ಕಾಲುಗಳಿಗೆ ಬೆಲ್ಟ್ ಕಟ್ಟಿ ಕಬ್ಬಿಣದ ಮ್ಯಾಟ್ ಮೇಲೆ ಮಲಗಿಸಿ ಕ್ರೇನ್ ಮೂಲಕ ನಾಲೆಯಿಂದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆತ್ತಿದ್ದಾರೆ.

ಸುರಕ್ಷಿತವಾಗಿ ಮೇಲೆತ್ತಿ ಲಾರಿ ಮೂಲಕ ಸ್ಥಳಾಂತರಿಸಿದ್ದಾರೆ. ಸದ್ಯ ಕಾಡಾನೆಗೆ ಚಿಕಿತ್ಸೆ ನೀಡಿ ಹಲಗೂರು ಅರಣ್ಯ ಪ್ರದೇಶಕ್ಕೆ ಅರಣ್ಯ ಸಿಬ್ಬಂದಿ ಬಿಟ್ಟಿದ್ದಾರೆ. ಆ ಮೂಲಕ ಕಾಡಾನೆ ರಕ್ಷಣಾ ಕಾರ್ಯಾಚರಣೆ ಯಶಸ್ವಿ ಆಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *