ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ರೂಪುಗೊಂಡಿದ್ದ ದಿತ್ವಾ ಚಂಡಮಾರುತವು ಪ್ರಸ್ತುತ ದುರ್ಬಲಗೊಂಡು ಡೀಪ್ ಡಿಪ್ರೆಶನ್ ಆಗಿ ಪರಿವರ್ತನೆಗೊಂಡಿದೆ. ಇದರಿಂದ ಕರ್ನಾಟಕದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದ್ದು, ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಹವಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಡಿಸೆಂಬರ್ 1 ರಿಂದ ಡಿಸೆಂಬರ್ 4 ರವರೆಗೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರ ಮಳೆಯ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಗರಿಷ್ಠ ಉಷ್ಣಾಂಶದಲ್ಲಿ ಭಾರಿ ಇಳಿಮುಖ ಕಂಡುಬಂದಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಂಟಿಗ್ರೇಡ್ಗೆ ಕುಸಿದಿದ್ದು, ಹಗಲಿನ ಹೊತ್ತಿನಲ್ಲಿ ಈ ಪ್ರಮಾಣದ ತಾಪಮಾನ ಕುಸಿತ ಅಪರೂಪ ಎಂದು ಅವರು ಹೇಳಿದ್ದಾರೆ. ರಾತ್ರಿ ಮತ್ತು ಹಗಲಿನ ನಡುವಿನ ತಾಪಮಾನ ವ್ಯತ್ಯಾಸ ಕೇವಲ 2-3 ಡಿಗ್ರಿ ಸೆಂಟಿಗ್ರೇಡ್ಗೆ ಇಳಿದಿರುವುದು ಚಳಿಯ ಅನುಭವವನ್ನು ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಇಂದಿನಿಂದ ಮೂರನೇ ತಾರೀಖಿನವರೆಗೆ ಚಳಿಯ ವಾತಾವರಣ ಮುಂದುವರಿದು, ನಂತರ ಬಿಸಿಲು ಮೂಡುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
For More Updates Join our WhatsApp Group :




