ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ತೇಪೆ ಹಚ್ಚುವ ನಿಟ್ಟಿನಲ್ಲಿ ಹೈಕಮಾಂಡ್ ಸೂಚನೆಯಂತೆ ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜತೆಗೆ ‘ಬ್ರೇಕ್ಫಾಸ್ಟ್ ಮೀಟಿಂಗ್’ ನಡೆದಿತ್ತು. ನಂತರ ಉಭಯ ನಾಯಕರೂ ಒಗ್ಗಟ್ಟು ಪ್ರದರ್ಶಿಸಿದ್ದರು. ಆ ಬಳಿಕ ಸಿದ್ದರಾಮಯ್ಯ ಅವರನ್ನು ಉಪಾಹಾರಕ್ಕೆ ಮನೆಗೆ ಬರುವಂತೆ ಡಿಕೆ ಶಿವಕುಮಾರ್ ಆಹ್ವಾನಿಸಿದ್ದರು. ಅದರಂತೆ ಇಂದು (ಡಿಸೆಂಬರ್ 2) ಡಿಕೆ ಶಿವಕುಮಾರ್ ಅವರ ಸದಾಶಿವ ನಗರ ನಿವಾಸದಲ್ಲಿ ಉಭಯ ನಾಯಕರು ‘ಬ್ರೇಕ್ಫಾಸ್ಟ್ ಮೀಟಿಂಗ್’ ಮಾಡಿದ್ದಾರೆ. ಡಿಕೆಶಿ ನಿವಾಸದಲ್ಲಿ ಸಿದ್ದರಾಮಯ್ಯ ನಾಟಿ ಕೋಳಿ ಸಾರು, ಇಡ್ಲಿ ಸವಿದಿದ್ದಾರೆ. ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ: ಸಿದ್ದರಾಮಯ್ಯ ಪುನರುಚ್ಚಾರ
ಪಕ್ಷದ ಆಂತರಿಕ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದಂತೆ ನಾನು, ಡಿಸಿಎಂ ನಡೆದುಕೊಳ್ಳುತ್ತೇವೆ ಎಂದು ಪುನರುಚ್ಚರಿಸಿದರು. ಹೈಕಮಾಂಡ್ ಹೇಳಿದಂತೆ ಕೇಳಬೇಕೆಂದು ಮೊನ್ನೆಯೂ ಚರ್ಚೆ ಆಗಿತ್ತು. ಇಂದು ಕೂಡ ಚರ್ಚೆ ಮಾಡಿದ್ದೇವೆ. ನಾನು, ಡಿ.ಕೆ.ಶಿವಕುಮಾರ್ ಸಹೋದರರೇ ಎಂದು ಸಿದ್ದರಾಮಯ್ಯ ಹೇಳಿದರು.
ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇವೆ: ಸಿಎಂ
ಪಕ್ಷದ ಆಂತರಿಕ ವಿಚಾರದಲ್ಲಿ ಹಾಗೂ ಅಧಿಕಾರ ಹಂಚಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೈಕಮಾಂಡ್ ಹೇಳಿದಂತೆಯೇ ನಡೆದುಕೊಳ್ಳುತ್ತೇವೆ. ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ನಾಯಕರು ಕರೆದರೆ ದೆಹಲಿಗೆ ಹೋಗುತ್ತೇವೆ. ಬುಧವಾರ ಮಂಗಳೂರಿನಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸಹ ಅಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
For More Updates Join our WhatsApp Group :
