ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಸಂಚಾರ ಮಾಡಬೇಕಿದ್ದ ಮತ್ತು ಬುಧವಾರ ಹೊರಡಲಿರುವ ಸುಮಾರು 58 ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿವೆ ಎಂದು ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಕೈಸ್ಕ್ಯಾನರ್ ತಿಳಿಸಿದೆ. ಈ ಪೈಕಿ, ಮಂಗಳವಾರ ಸುಮಾರು 29 ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿವೆ. ಅದರಲ್ಲೂ ಇಂಡಿಗೋ ಏರ್ಲೈನ್ಸ್ನ ಹೆಚ್ಚಿನ ವಿಮಾನಗಳು ವಿಳಂಬವಾಗಿವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮೂಲಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಕಾರಣಗಳಿಂದ ಈ ವಿಳಂಬವಾಗಿದೆ. ವಿಮಾನ ನಿಲ್ದಾಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ವಿಮಾನ ಸಂಚಾರ ವಿಳಂಬಕ್ಕೆ ಕಾರಣವೇನು?
ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯನ್ನು ನಿರ್ವಹಿಸುವ ‘ಥರ್ಡ್ ಪಾರ್ಟಿ ಸಿಸ್ಟಂ’ನಲ್ಲಿ ಉಂಟಾದ ಅಡಚಣೆಯಿಂದಾಗಿ ಚೆಕ್-ಇನ್ ಮೇಲೆ ಪರಿಣಾಮವಾಗುತ್ತಿದೆ. ಇದರ ಪರಿಣಾಮವಾಗಿ ಏರ್ ಇಂಡಿಯಾ ಸೇರಿದಂತೆ ಹಲವಾರು ಏರ್ಲೈನ್ಸ್ಗಳ ಕಾರ್ಯಾಚರಣೆಯಲ್ಲಿ ವಿಳಂಬವಾಗುತ್ತಿದೆ.
ಪ್ರಯಾಣಿಕರಿಗೆ ಸುಗಮ ಚೆಕ್-ಇನ್ ಮಾಡಿಕೊಡುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ವ್ಯವಸ್ಥೆಯನ್ನು ಹಂತಹಂತವಾಗಿ ಪುನಃಸ್ಥಾಪಿಸಲಾಗುತ್ತಿದ್ದರೂ, ಪರಿಸ್ಥಿತಿ ಸಂಪೂರ್ಣವಾಗಿ ಮೊದಲಿನ ಸ್ಥಿತಿಗೆ ಬರುವ ವರೆಗೆ ನಮ್ಮ ಕೆಲವು ವಿಮಾನಗಳು ವಿಳಂಬವಾಗಿ ಸಂಚರಿಸಬಹುದು ಎಂದು ಏರ್ ಇಂಡಿಯಾ ಎಕ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಏರ್ ಇಂಡಿಯಾದ 6 ವಿಮಾನಗಳು ಈಗಾಗಲೇ ವಿಳಂಬವಾಗಿ ಸಂಚರಿಸಿವೆ.
ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ತಾವು ಪ್ರಯಾಣಿಸಲಿರುವ ವಿಮಾನದ ಸ್ಥಿತಿಗತಿ ಪರಿಶೀಲಿಸಿಕೊಂಡು ಹೊರಡುವಂತೆ ಪ್ರಯಾಣಿಕರಿಗೆ ಏರ್ ಇಂಡಿಯಾ ಮನವಿ ಮಾಡಿದೆ.
ಸ್ಟಾರ್ ಏರ್, ಸ್ಪೈಸ್‌ಜೆಟ್,ಅಕಾಸಾ ಏರ್, ಸಿಂಗಾಪುರ್ ಏರ್‌ಲೈನ್ಸ್, ಬಾಟಿಕ್ ಏರ್ ಮಲೇಷ್ಯಾ, ಏರ್ ಫ್ರಾನ್ಸ್, ಲುಫ್ಥಾನ್ಸ, ವರ್ಜಿನ್ ಅಟ್ಲಾಂಟಿಕ್ ಮತ್ತು ಕುವೈತ್ ಏರ್‌ವೇ ಗಳ ಕೆಲ ವಿಮಾನಗಳು ಕೂಡ ವಿಳಂಬವಾಗಿ ಸಂಚರಿಸಿವೆ.
For More Updates Join our WhatsApp Group :
