ಬಾಗಿಲು ಮುರಿಯದೇ 80 ಲಕ್ಷ ಮೌಲ್ಯದ ಆಭರಣ ಲೂಟಿ – ಪೊಲೀಸರಿಗೆ ಪತ್ತೆ ಸವಾಲು.
ಗದಗ: ಅಂಗಡಿ ಬಾಗಿಲು ಮುರಿಯದೆ ಖತರ್ನಾಕ್ ಗ್ಯಾಂಗ್ ಒಂದು ಬಂಗಾರದ ಅಂಗಡಿ ದೋಚಿರುವ ಘಟನೆ ಗದಗ ನಗರದ ಮಹೇಂದ್ರಕರ ಸರ್ಕಲ್ ಬಳಿ ನಡೆದಿದೆ. ಶಾಂತದುರ್ಗಾ ಹೆಸರಿನ ಜ್ಯುವೆಲ್ಲರಿ ಶಾಪ್ನಲ್ಲಿ ದರೋಡೆ ನಡೆದಿದ್ದು, ಚಿನ್ನ ಮತ್ತು ಬೆಳ್ಳಿ ಸೇರಿ ಸುಮಾರು 80 ಲಕ್ಷ ರೂ. ಮೌಲ್ಯದ ಆಭರಣಗಳು ರಾಬರಿಯಾಗಿವೆ. ಬೆಳಿಗ್ಗೆ ಬಂದು ಮಾಲಕರು ಅಂಗಡಿ ಓಪನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇನ್ನು ದರೋಡೆ ನಡೆಸಿರುವ ಗ್ಯಾಂಗ್ನ ಚಾಣಾಕ್ಷತೆ ಕಂಡು ಪೊಲೀಸರೇ ದಂಗಾಗಿದ್ದಾರೆ. ಅಂಗಡಿ ಶೆಟರ್ ಮುರಿದಿಲ್ಲ, ಅಕ್ಕಪಕ್ಕ ಸೇರಿ ಹಿಂಭಾಗದಲ್ಲೂ ಬೇರೆ ಕಟ್ಟಡಗಳಿವೆ. ಹೀಗಿದ್ದರೂ ಕಳ್ಳರು ಅಂಗಡಿಗೆ ನುಗ್ಗಿದ್ದೇಗೆ ಎಂದು ಪೊಲೀಸರು ಪರೀಕ್ಷಿಸಿದಾಗ ಖತರ್ನಾಕ್ ಗ್ಯಾಂಗ್ ಚಿನ್ನದ ಅಂಗಡಿಗೆ ಎಂಟ್ರಿಕೊಟ್ಟಿದ್ದು ಕಟ್ಟಡದ ಮೇಲ್ಭಾಗದಿಂದ ಎಂಬುದು ಗೊತ್ತಾಗಿದೆ. ಅಂಗಡಿ ಮೇಲ್ಭಾಗದಲ್ಲಿ ಕೊರೆದು ಒಳನುಗ್ಗಿರೋ ಗ್ಯಾಂಗ್, ಅಪಾರ ಬೆಳ್ಳಿ ವಸ್ತುಗಳು ಮತ್ತು ಸ್ವಲ್ಪ ಪ್ರಮಾಣದ ಚಿನ್ನ ಸೇರಿ ನಗದನ್ನು ದೋಚಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಶ್ವಾನದಳ ತೀವ್ರ ಪರಿಶೀಲನೆ ನಡೆಸಿದೆ. ಆದ್ರೆ, ಕಳ್ಳರ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಇನ್ನು ಚಿನ್ನದ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾಗಳು ಬಂದ್ ಆಗಿರುವ ಕಾರಣ, ದರೋಡೆಕೋರರ ಪತ್ತೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಎಸ್ಪಿ ರೋಹನ್ ಜಗದೀಶ್, ಡಿವೈಎಸ್ಪಿ ಮುರ್ತುಜಾ ಖಾಜಿ, ಸಿಪಿಐ ಲಾಲಸಾಬ್ ಜೂಲಕಟ್ಟಿ ಸೇರಿ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ. ಸೋಕೋ ತಂಡದಿಂದಲೂ ಪರಿಶೀಲನೆ ನಡೆದಿದೆ.
ಖತರ್ನಾಕ್ ಗ್ಯಾಂಗ್ನ ಕೈಚಳಕ ಕಂಡು ಮುದ್ರಣಕಾಶಿ ಗದಗದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಮೇಲಿಂದ ಮೇಲೆ ಇಂತಹ ದರೋಡೆ ಪ್ರಕರಣಗಳು ನಡೆದ ಬಗ್ಗೆ ಕೇಳುತ್ತಿದ್ದೆವು. ಆದರೆ ಈಗ ನಮ್ಮ ಕಾಲಬುಡದಲ್ಲೇ ಇಷ್ಟು ದೊಡ್ಡ ದರೋಡೆ ನಡೆದಿರೋದು ಆಘಾತ ಮೂಡಿಸಿದೆ. ಚಿನ್ನದ ಅಂಗಡಿ ದರೋಡೆ ನಡೆಸಿರುವ ಆರೋಪಿಗಳನ್ನು ಶೀಘ್ರ ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
For More Updates Join our WhatsApp Group :
