ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿಯ ಆತ್ಮಹ*ತ್ಯೆ
ಬೆಂಗಳೂರು : ಬೆಂಗಳೂರಿನ ಕೆಂಗೇರಿ ನಮ್ಮ ಮೆಟ್ರೋ ಸ್ಟೇಷನ್‌ನಲ್ಲಿ ಶುಕ್ರವಾರ ಬೆಳಗ್ಗೆ ದುಃಖಕರ ಘಟನೆ ಸಂಭವಿಸಿದೆ. ಬೆಳಗ್ಗೆ ಸುಮಾರು 8.15ಕ್ಕೆ ವ್ಯಕ್ತಿಯೊಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಮೈಸೂರು ರಸ್ತೆ–ಚಲ್ಲಘಟ್ಟ ನಡುವೆ ರೈಲು ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಮೆಟ್ರೋ ರೈಲುಗಳು ವೈಟ್ಫೀಲ್ಡ್ನಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ ಮಾತ್ರ ಸಂಚರಿಸುತ್ತಿವೆ.
ಘಟನೆ ಸ್ಥಳಕ್ಕೆ ಮೆಟ್ರೋ ಸುರಕ್ಷತಾ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತನನ್ನು ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯ ಶಾಂತಗೌಡ (25) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾಂತನಗೌಡ ಮೃತದೇಹವನ್ನು ರಾಜರಾಜೇಶ್ವರಿನಗರ ಆಸ್ಪತ್ರೆಗೆ ರವಾನಿಸಲಾಗಿದೆ.
ನೇರಳೆ ಮಾರ್ಗದ ಮೆಟ್ರೋ ರೈಲುಗಳು ಪ್ರಸ್ತುತ ಮೈಸೂರು ರಸ್ತೆ ನಿಲ್ದಾಣದವರೆಗೆ ಮಾತ್ರ ಸಂಚರಿಸುತ್ತಿವೆ. ಮೈಸೂರು ರಸ್ತೆ ಮತ್ತು ಚಲಘಟ್ಟ ನಡುವಿನ ಸೇವೆಗಳು ಕೆಂಗೇರಿ ನಿಲ್ದಾಣದಲ್ಲಿ ಸಂಭವಿಸಿದ ಆತ್ಮಹತ್ಯೆ ಪ್ರಯತ್ನದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಬಿಎಂಆರ್ಸಿಎಲ್ ಎಕ್ಸ್ ಸಂದೇಶದ ಮೂಲಕ ತಿಳಿಸಿದೆ.
ಸದ್ಯ ಮೆಟ್ರೋ ರೈಲಿನಡಿಯಲ್ಲಿ ಸಿಲುಕಿದ ಸ್ಥಿತಿಯಲ್ಲಿ ವ್ಯಕ್ತಿಯ ದೇಹ ಇದೆ. ಸ್ಥಳಕ್ಕೆ ಪೋಲಿಸರು ಆಗಮಿಸಿದ ನಂತರ ಮೆಟ್ರೋ ರೈಲನ್ನು ತೆರವು ಮಾಡಲಾಗುತ್ತದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ. ಪೋಲಿಸರಿಗಾಗಿ ಮೆಟ್ರೋ ಅಧಿಕಾರಿಗಳು ಕಾಯುತ್ತಿದ್ದಾರೆ.
ಯಾವೆಲ್ಲ ನಿಲ್ದಾಣಗಳಲ್ಲಿ ಮೆಟ್ರೋ ರೈಲು ಸಂಚಾರ ಇಲ್ಲ?
ಪ್ರಸ್ತುತ ಚಲ್ಲಘಟ್ಟ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್, ಪಂತರಪಾಳ್ಯ, ಕೆಂಗೇರಿ ನಿಲ್ದಾಣಗಳಲ್ಲಿ ಮೆಟ್ರೋ ರೈಲು ಸಂಚಾರ ಇರುವುದಿಲ್ಲ. ವೈಟ್ಫೀಲ್ಡ್ನಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ ರೈಲು ಸಂಚಾರ ಎಂದಿನಂತೆಯೇ ಸಾಗಿದೆ.
For More Updates Join our WhatsApp Group :
