ಮಾಸ್ಕ್​ಮ್ಯಾನ್ -ಸ್ವಾಮೀಜಿ ಮೀಟಿಂಗ್ ರಹಸ್ಯ ಬಹಿರಂಗ

ಮಾಸ್ಕ್ಮ್ಯಾನ್-ಸ್ವಾಮೀಜಿ ಮೀಟಿಂಗ್ ರಹಸ್ಯ ಬಹಿರಂಗ

ಧರ್ಮಸ್ಥಳ ಪ್ರಕರಣದಲ್ಲಿ ಪ್ರಭಾವಿ ಮೀಟಿಂಗ್ ವಿವರ ಮತ್ತು ಕಾನೂನು ಹೋರಾಟಕ್ಕೆ ತಯಾರಿ

ಮಂಗಳೂರು : ಧರ್ಮಸ್ಥಳ ಪ್ರಕರಣ ಸಂಬಂಧ ಮಾಸ್ಕ್​ಮ್ಯಾನ್ ಚಿನ್ನಯ್ಯ ಹಾಗೂ ಪ್ರಭಾವಿ ಸ್ವಾಮೀಜಿಯೊಬ್ಬರ ನಡುವೆ ನಡೆದಿದ್ದ ಮೀಟಿಂಗ್ ರಹಸ್ಯವನ್ನು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಹಿರಂಗಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತನಾಡಿದ ಅವರು, ನಾನು ಮತ್ತು ಚಿನ್ನಯ್ಯ ಆ ಮಠಕ್ಕೆ ಹೋಗಿರುವುದು ಸತ್ಯ. ನಮ್ಮ ಜೊತೆಗೆ ಸೌಜನ್ಯ ಮನೆಯವರೂ ಮಠಕ್ಕೆ ಬಂದಿದ್ದರು. ಅಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಸ್ವಾಮೀಜಿಯ ಮುಂದೆಯೇ ಚಿನ್ನಯ್ಯ ಎಲ್ಲವನ್ನೂ ಬಿಡಿಸಿ ಹೇಳಿದ್ದಾನೆ. ನಾನು ಬಿಡುಗಡೆ ಮಾಡಿದ ಒಂದೂವರೆ ಗಂಟೆಯ ವಿಡಿಯೋಕ್ಕಿಂತ ಜಾಸ್ತಿಯೇ ಅಲ್ಲಿ ಮಾತನಾಡಿದ್ದಾನೆ. ಯಾರೆಲ್ಲ ಅತ್ಯಾಚಾರ ಎಸಗಿದ್ದಾರೆ, ಮಾಡಿಸಿದ್ದಾರೆ ಎಲ್ಲವನ್ನೂ ಹೇಳಿದ್ದಾನೆ ಎಂದು ಹೇಳಿದ್ದಾರೆ.

ಸ್ವಾಮೀಜಿಗಳು ಯಾಕೆ ಈ ವಿಚಾರವನ್ನು ಸಮಾಜದ ಮುಂದೆ ಹೇಳುತ್ತಿಲ್ಲ? ಸ್ವಾಮೀಜಿ ಸ್ವತಃ ಈ ವಿಚಾರವನ್ನು ಮುಖ್ಯಮಂತ್ರಿಗಳಲ್ಲಿ ಹೇಳಿ ಶಿಕ್ಷೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಶಿಕ್ಷೆ ಕೊಡಿಸಿಯೇ ಕೊಡಿಸುತ್ತೇನೆಂದು ಮಹಾಕಾಳನ ಮೇಲೆ ಪ್ರಮಾಣ ಮಾಡಿದ್ದರು. ಈಗ ಸ್ವಾಮೀಜಿಗಳು ನ್ಯಾಯ ಕೊಡಿಸಲಿ. ಅದು ಬಿಟ್ಟು ಮಠದಲ್ಲಿ ಕುಳಿತು ರಾಜಕೀಯ ಮಾಡುವುದಲ್ಲ. ಎಲ್ಲಾ ಸ್ವಾಮೀಜಿಗಳಿಗೂ ಈ ಮಾತು ಅನ್ವಯಿಸುತ್ತದೆ ಎಂದು ತಿಮರೋಡಿ ಹೇಳಿದ್ದಾರೆ.

ನಾವು ನೇರವಾಗಿ ಸನಾತನ ಧರ್ಮದ ಪ್ರತಿಪಾದಕರು. ಹಿಂದೂ ಧರ್ಮದ ವಿರೋಧಿಗಳಲ್ಲ. ಈ ವಿಚಾರವನ್ನು ಹಿಂದೆಯೂ ಹೇಳಿದ್ದೇನೆ, ಇಂದೂ ಹೇಳುತ್ತೇನೆ. ಮುಂದೆಯೂ ಹೇಳುತ್ತೇನೆ. ಎಸ್​ಐಟಿ ತನಿಖೆ ಆರಂಭವೇ ಆಗಿಲ್ಲ. ಅತ್ಯಾಚಾರಿಗಳ ವಿಚಾರಣೆ ಇನ್ನಷ್ಟೇ ಆಗಬೇಕಿದೆ. ಇಲ್ಲಿ ತನಕ ಬರೇ ಒಂದು ಬುರುಡೆ ಹಿಡಿದುಕೊಂಡು ನಾಟಕ ಮಾಡುತ್ತಿದ್ದಾರೆ ಅಷ್ಟೇ. ಎಸ್​ಐಟಿ ಒಳಗಡೆಯೇ ಷಡ್ಯಂತ್ರ ಮಾಡುವವರು ತುಂಬಿದ್ದಾರೆ. ಸ್ವತಹ ಎಸ್​​ಪಿ ಕೂಡಾ ಷಡ್ಯಂತ್ರದಲ್ಲಿ ಶಾಮೀಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯವೂ ಹೊರಬರಲಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ನಮಗೆ ಯಾರ ಮೇಲೆಯೂ ನಂಬಿಕೆ ಇಲ್ಲದಂತೆ ಆಗಿದೆ. ಮಾದ್ಯಮ, ಕಾರ್ಯಾಂಗ ಯಾವುದರ ಮೇಲೆಯೂ ನಂಬಿಕೆಯಿಲ್ಲ. ದೇಶದ ಕಾನೂನಿನ ಮೇಲೆ ಮಾತ್ರ ನಮಗೆ ನಂಬಿಕೆ ಇರುವುದು. ಮುಂದಿನ ದಿನಗಳಲ್ಲಿ ಕಾನೂನು ಮೂಲಕವೇ ನಾವು ಹೋರಾಟ ಮಾಡುತ್ತೇವೆ ಎಂದು ತಿಮರೋಡಿ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *