‘ಟಾಕ್ಸಿಕ್’ ಚಿತ್ರದ ನಿಜವಾದ ಹೀರೋಗಳು: ತಂತ್ರಜ್ಞರ ತಂಡ.
ಯಾವುದೇ ಸಿನಿಮಾಕ್ಕೆ ಮೂಲ ಜೀವಾಳ ಆ ಸಿನಿಮಾದ ತಂತ್ರಜ್ಞರು. ನಿರ್ದೇಶಕ, ಕ್ಯಾಮೆರಾಮ್ಯಾನ್, ಎಡಿಟರ್, ಕೊರಿಯೋಗ್ರಾಫರ್, ಪ್ರೊಡಕ್ಷನ್ ಡಿಸೈನರ್, ಸಂಗೀತ ನಿರ್ದೇಶಕ ಇನ್ನೂ ಕೆಲವರು. ಸಿನಿಮಾದ ನಿಜವಾದ ಬೆನ್ನೆಲುಬು ಈ ತಂತ್ರಜ್ಞರು. ನಟರುಗಳು ತೆರೆಯ ಮುಂದೆ ಕಾಣಿಸುತ್ತಾರೆ ಆದರೆ ನಿಜವಾಗಿಯೂ ‘ಹೀರೋ’ಗಳೆಂದರೆ ತಂತ್ರಜ್ಞರು. ಇದನ್ನು ಚೆನ್ನಾಗಿ ಅರಿತಿರುವ ನಟ ಯಶ್, ತಮ್ಮ ಮಹಾತ್ವಾಕಾಂಕ್ಷೆಯ ಸಿನಿಮಾ ‘ಟಾಕ್ಸಿಕ್’ಗಾಗಿ ಅದ್ಭುತವಾದ ತಂತ್ರಜ್ಞರ ತಂಡವನ್ನು ಸೇರಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕೆ ಕೆಲಸ ಮಾಡಿರುವ ಪ್ರಮುಖ ತಂತ್ರಜ್ಞರ ಪಟ್ಟಿಯಿರುವ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ.
ಬಹುತೇಕರಿಗೆ ತಿಳಿದಿರುವಂತೆ ‘ಟಾಕ್ಸಿಕ್’ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಮಲಯಾಳಂ ಚಿತ್ರರಂಗದ ನಿರ್ದೇಶಕಿ ಮತ್ತು ನಟಿ ಗೀತು ಮೋಹನ್ದಾಸ್. ವಿಶೇಷವೆಂದರೆ ‘ಟಾಕ್ಸಿಕ್’ ಸಿನಿಮಾದ ಕತೆಯನ್ನು ಜಂಟಿಯಾಗಿ ಯಶ್ ಮತ್ತು ಗೀತು ಮೋಹನ್ದಾಸ್ ಬರೆದಿದ್ದಾರೆ. ಕತೆ ರಚನೆಯಲ್ಲಿ ಯಶ್ ಅವರ ಪಾಲುದಾರಿಕೆಯೂ ಇದೆ. ಸಿನಿಮಾಕ್ಕೆ ಬಂಡವಾಳವನ್ನು ಯಶ್ ಮತ್ತು ಕೆವಿಎನ್ ಒಟ್ಟಿಗೆ ಹೂಡಿಕೆ ಮಾಡಿದ್ದಾರೆ.
ಸಿನಿಮಾದ ಸಿನಿಮಾಟೊಗ್ರಾಫರ್ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್ ಆಗಿರುವ ರಾಜೀವ್ ರವಿ. ಭಾರತದ ಅತ್ಯುತ್ತಮ ಸಿನಿಮಾಟೊಗ್ರಾಫರ್ಗಳಲ್ಲಿ ಇವರು ಸಹ ಒಬ್ಬರು. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಬಾಂಬೆ ವೆಲ್ವೆಟ್’, ‘ಲೈಯರ್ಸ್ ಡೈಸ್’, ‘ನೋ ಸ್ಮೋಕಿಂಗ್’, ‘ಉಡ್ತಾ ಪಂಜಾಬ್’, ಹಿಂದಿಯ ‘ಬೆಲ್ ಬಾಟಮ್’ ಇನ್ನೂ ಹಲವಾರು ಅತ್ಯುತ್ತಮ ಸಿನಿಮಾಗಳಿಗೆ ಕ್ಯಾಮೆರಾಮ್ಯಾನ್ ಆಗಿದ್ದಾರೆ. ಜೊತೆಗೆ ‘ಅನ್ನಯುಂ ರಸೂಲುಂ’, ‘ಕಮ್ಮಟಿಪಾದಂ’ ಸೇರಿದಂತೆ ಇನ್ನೂ ಕೆಲವು ಅತ್ಯುತ್ತಮ ಮಲಯಾಳಂ ಸಿನಿಮಾಗಳ ನಿರ್ದೇಶನ ಸಹ ಮಾಡಿದ್ದಾರೆ.
For More Updates Join our WhatsApp Group :




