ಕರ್ನಾಟಕ ರಾಜಕಾರಣದಲ್ಲಿ ಹೊಸ ಚಲನೆ.

ಕರ್ನಾಟಕ ರಾಜಕಾರಣದಲ್ಲಿ ಹೊಸ ಚಲನೆ.

ರೆಬೆಲ್ ನಾಯಕ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ಹೊಸ ಪಕ್ಷ.

ಕಲಬುರಗಿ: ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಜೆಡಿಎಸ್​​ನಿಂದ ಉಚ್ಛಾಟನೆಗೊಂಡಿದ್ದ ನಾಯಕ ಸಿ.ಎಂ.ಇಬ್ರಾಹಿಂ, ಜನವರಿ 24ರಂದು ರಾಜ್ಯದಲ್ಲಿ ಹೊಸ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ಘೋಷಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ನವ ಕರ್ನಾಟಕ ಆಂದೋಲನದ ಸಭೆ ಬಳಿಕ ಮಾತನಾಡಿದ ಅವರು, ಸಮಾನ ಮನಸ್ಕರೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲೇ ಪಕ್ಷದ ಚಿಹ್ನೆಯನ್ನು ನಿರ್ಧರಿಸಲಾಗುವುದು. ಹೊಸ ಪಕ್ಷವು ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳ ಅನುಸರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಹೊಸ ಪಕ್ಷ ಕಟ್ಟುವ ಇರಾದೆ ಬಗ್ಗೆ ಮಾತನಾಡಿದ್ದ ಸಿ.ಎಂ. ಇಬ್ರಾಹಿಂ, ಜೆಡಿಎಸ್​​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೆಡಿಎಸ್​ನವರು ಬಿಜೆಪಿಯ ಬಸ್ ಸ್ಟ್ಯಾಂಡ್​ನಲ್ಲಿ‌ ಕುಳಿತಿದ್ದಾರೆ. ಆದರೆ ಜೆಡಿಎಸ್​ನವರಿಗೆ ಬಸ್ ಇಲ್ಲ, ಏನೂ ಇಲ್ಲ ಎಂದು ವ್ಯಂಗ್ಯವಾಡಿದ್ದರು. ಕಾಂಗ್ರೆಸ್​​​ಗೆ ಮತ್ತೆ ಹೋಗ್ತೀರಾ ಸರ್​​ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಅವರು, ನನ್ನ ಮನಸ್ಸಿನಲ್ಲಿ‌ ನಿಶ್ಚಳವಾಗಿದ್ದೇನೆ, ಜನರ ಹಿತ ಮುಖ್ಯ ಎಂದಿದ್ದರು. ಆ ಬೆನ್ನಲ್ಲೇ ಈಗ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ.

ಜೆಡಿಎಸ್​-ಬಿಜೆಪಿ ಮೈತ್ರಿ ಘೋಷಣೆಯಾದ ಬಳಿಕ ಅಂದು ಜೆಡಿಎಸ್​​ ರಾಜ್ಯ ಅಧ್ಯಕ್ಷರಾಗಿದ್ದ ಇಬ್ರಾಹಿಂ ನೀಡಿದ್ದ ಹೇಳಿಕೆಗಳು ಪಕ್ಷಕ್ಕೆ ಇರುಸು-ಮುರುಸು ಉಂಟು ಮಾಡಿದ್ದವು. ತಮ್ಮ ಬೆಂಬಲಿಗರ ಸಭೆಯನ್ನು ನಡೆಸಿ ನಮ್ಮದೇ ಒರಿಜಿನಲ್​ ಜೆಡಿಎಸ್​ ಎಂದಿದ್ದ ಅವರು, ರಾಜ್ಯಾಧ್ಯಕ್ಷನಾಗಿದ್ದರೂ ನನ್ನ ಗಮನಕ್ಕೆ ತರದೇ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಇಂಡಿ ಒಕ್ಕೂಟಕ್ಕೇ ನನ್ನ ಬೆಂಬಲ ಎಂದು ಬಹಿರಂಗವಾಗಿ ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ 77 ವರ್ಷದ ಇಬ್ರಾಹಿಂ ಅವರನ್ನು 2023ರಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಜೆಡಿಎಸ್‌ನಿಂದ ಉಚ್ಛಾಟಿಸಲಾಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *