ಒಂದೇ ತಿಂಗಳಲ್ಲಿ 8 ಮಂದಿ ಪೊಲೀಸ್ ಅಮಾನತು.
ಬೆಂಗಳೂರು : ಜನರನ್ನು ಕಳ್ಳಕಾಕರಿಂದ ರಕ್ಷಿಸಬೇಕಾದ ಪೊಲೀಸರೇ ಕೆಲ ಕಳ್ಳತನ, ಲಂಚ ಪ್ರಕರಣಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆ ಕುಸಿಯುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು 8 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದ್ದು, ಈ ವಿಷಯವು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ಸದನದಲ್ಲಿ ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಗಂಭೀರ ಚರ್ಚೆ ನಡೆಸಲು ಚಿಂತನೆ ನಡೆಸಲಾಗಿದೆ.
ಅಮಾನತುಗೊಂಡವರಲ್ಲಿ ಬೆಳ್ಳಂದೂರು ಸಬ್‌ಇನ್ಸ್‌ಪೆಕ್ಟರ್ ಸಂತೋಷ್ ಮತ್ತು ಕಾನ್ಸ್‌ಟೇಬಲ್ ಗೋರಖ್‌ನಾಥ್ (ಯುಡಿಆರ್ ಪ್ರತಿ ನೀಡಲು ಲಂಚ), ವರ್ತೂರು ಪೊಲೀಸ್ ಠಾಣೆಯ ಮೂವರು ಕ್ರೈಂ ಸಿಬ್ಬಂದಿ (ಮಹಿಳೆ ಮೇಲೆ ಹಲ್ಲೆ ಪ್ರಕರಣ), ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ (ಸಿದ್ದಾಪುರದ 7 ಕೋಟಿ 11 ಲಕ್ಷ ರಾಬರಿ ಪ್ರಕರಣ), ಹಾಗೂ ಕಾನ್ಸ್‌ಟೇಬಲ್‌ಗಳಾದ ಬಸವರಾಜ್ ಮತ್ತು ಗುರುದತ್ತ (ಹಿರಿಯ ನಾಗರಿಕರಿಗೆ ಹೆದರಿಸಿ ಲಂಚ) ಸೇರಿದ್ದಾರೆ. ಈ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದರು.
For More Updates Join our WhatsApp Group :




