ತುಮಕೂರು ಡಿಸಿ ಕಚೇರಿಗೂ ಇ-ಮೇಲ್ ಮೂಲಕ ಬೆದರಿಕೆ, ಪೊಲೀಸ್ ಬಂದೋಬಸ್ತ್.
ಉತ್ತರ ಕನ್ನಡ : ಇತ್ತೀಚೆಗೆ ಸರ್ಕಾರಿ ಕಚೇರಿ ಸೇರಿ ಹಲವು ಕಡೆ ಬಾಂಬ್ ಬೆದರಿಕೆಗಳು ಕೇಳಿಬರುತ್ತಿವೆ. ಬೆದರಿಕೆ ಹುಸಿಯಾಗಿರಲಿ ಇಲ್ಲವೇ ಸತ್ಯವಾಗಿರಲಿ ಜನರಲ್ಲಿ ಇದರಿಂದ ಕಳವಳ ಉಂಟಾಗುವುದಂತೂ ಸತ್ಯ. ಹೀಗಿರುವಾಗ ಉತ್ತರ ಕನ್ನಡದ ಭಟ್ಕಳ ತಹಶೀಲ್ದಾರ್ ಕಚೇರಿ ಹಾಗೂ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿರುವುದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ನಿನ್ನೆಯಷ್ಟೇ (ಡಿ.15) ಗದಗ, ಮಂಗಳೂರಿನ ಸರ್ಕಾರಿ ಕಚೇರಿಗಳಲ್ಲಿಯೂ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಗಳು ಬಂದಿದ್ದವು. ಇದೀಗ ಮತ್ತೊಮ್ಮೆ ಇಂತಹದ್ದೇ ಇ-ಮೇಲ್ ಬಂದಿರುವುದು ಕಳವಳಕಾರಿಯಾಗಿದೆ.
ಎಲ್ಲರನ್ನೂ ತಕ್ಷಣ ಕಚೇರಿಯಿಂದ ತೆರವುಗೊಳಿಸಿ ಎಂದು ಇ-ಮೇಲ್
ಭಟ್ಕಳ ತಹಶೀಲ್ದಾರ್ ಕಚೇರಿಗೆ ಬೆಳಿಗ್ಗೆ 7.25ರ ಸುಮಾರಿಗೆ “ಗೈನಾ ರಮೇಶ್@ಔಟ್ಲುಕ್ ಡಾಟ್ ಕಾಂ” ಎಂಬ ಇ-ಮೇಲ್ ಐಡಿಯಿಂದ ಬೆದರಿಕೆಯ ಸಂದೇಶ ರವಾನೆಯಾಗಿದ್ದು, ಕಚೇರಿಯಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿದೆ. “ಎಲ್ಲರನ್ನೂ ತಕ್ಷಣ ತಹಶೀಲ್ದಾರ್ ಕಚೇರಿಯಿಂದ ತೆರವುಗೊಳಿಸಿ” ಎಂಬ ಹೆಡ್ಡಿಂಗ್ನೊಂದಿಗೆ ಕನ್ನಡದಲ್ಲಿ ಸಂದೇಶ ಕಳುಹಿಸಲಾಗಿದೆ.
ಇ-ಮೇಲ್ ಬಾಡಿಯಲ್ಲಿ , ಪ್ರಶಾಂತ್ ಕಿಶೋರ್ ಹಾಗೂ ಸುನೀಲ್ ಕನುಗೋಲು ಮುಂತಾದವರ ಸೂಚನೆಯಂತೆ ತಮಿಳುನಾಡಿನ ಡಿಎಂಕೆ ಸರಕಾರ 2001ರಲ್ಲಿ ಮಾಧ್ಯಮವನ್ನು ಬುಡಮೇಲು ಮಾಡಲು ಯತ್ನಿಸಿತ್ತು. ಇದು ಹತೋಟಿ ತಪ್ಪಿದಾಗ ರಾಧಾಕೃಷ್ಣನ್ ಐಪಿಎಸ್ ಹಾಗೂ ಜಾಫರ್ ಸೇಟ್ ಮೂಲಕ ಗೆಲಿಲಿಯೋ ಆ್ಯಪ್ ಮೂಲಕ ಕನ್ನಡದವರ ಮೇಲೆ ಗೂಡಾಚಾರಿಕೆ ಮಾಡಿದರು. ಡಿಎಂಕೆ ಉದಯನಿಧಿಯ ಉದ್ದೇಶ ಹಣಗಳಿಸುವುದಕ್ಕಿಂತ ಹೆಚ್ಚಿನದ್ದೇ ಇದೆ ಎಂದು ತಲೆಬುಡವಿಲ್ಲದ ಆರೋಪಗಳನ್ನು ಮಾಡಲಾಗಿದೆ.
ಕಚೇರಿ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್
ಇ-ಮೇಲ್ನಲ್ಲಿ ಅನಾಥಾಶ್ರಮಗಳ ಬಾಲಕಿಯರ ದುರುಪಯೋಗ ಸೇರಿದಂತೆ ಹಲವು ಅಸಂಬದ್ಧ ವಿಷಯಗಳನ್ನು ಉಲ್ಲೇಖಿಸಲಾಗಿದ್ದು, ಈ ಬೆದರಿಕೆಯೊಂದಿಗೆ ಸಮಾಜದೊಳಗೆ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆ ಭಟ್ಕಳ ತಹಶೀಲ್ದಾರ್ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ಸಂಪೂರ್ಣ ತಪಾಸಣೆ ನಡೆಸಲಾಗಿದೆ.
ತುಮಕೂರಿನ ಡಿಸಿ ಕಚೇರಿಗೂ ಬೆದರಿಕೆ ಇ-ಮೇಲ್
ಇದೇ ವೇಳೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ಅಧಿಕೃತ ಇ-ಮೇಲ್ ಐಡಿಗೂ ಬೆಳಿಗ್ಗೆ 7 ಗಂಟೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ಪೊಲೀಸರು ಡಿಸಿ ಕಚೇರಿಗೆ ಧಾವಿಸಿ ಒಳಭಾಗದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಸದ್ಯ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
For More Updates Join our WhatsApp Group :




