ಹುಡುಗರ ‘ಕಂಕಣ ಭಾಗ್ಯ’ಕ್ಕೂ ಬಿತ್ತು ಕಾಡಾನೆಗಳ ಛಾಯೆ!

ಹುಡುಗರ ‘ಕಂಕಣ ಭಾಗ್ಯ’ಕ್ಕೂ ಬಿತ್ತು ಕಾಡಾನೆಗಳ ಛಾಯೆ!

ಕಾಡಾನೆ ಹಾವಳಿ ರಾಮನಗರದಲ್ಲಿ ಹೆಚ್ಚಾಗಿದೆ.

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಪರಿಣಾಮ ಕೃಷಿ ಚಟುವಟಿಕೆ ಮಾತ್ರವಲ್ಲದೆ ಗ್ರಾಮೀಣ ಸಮಾಜಿಕ ಜೀವನದ ಮೇಲೂ ಬೀರಿದೆ. ರಾಮನಗರ ತಾಲೂಕಿನ ನೆಲಮಲೆ ಗ್ರಾಮದಲ್ಲಿ ಕಾಡಾನೆಗಳ ಭೀತಿಯಿಂದಾಗಿ 30ಕ್ಕೂ ಹೆಚ್ಚು ಯುವಕರಿಗೆ ಮದುವೆ ಭಾಗ್ಯವೇ ಕೈ ತಪ್ಪುತ್ತಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ 30ರಿಂದ 35 ವರ್ಷ ವಯಸ್ಸಿನ ಯುವಕರಿದ್ದು, ಅವರಿಗೆ ಇನ್ನೂ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಇದಕ್ಕೆ ಕಾರಣ ಮಾತ್ರ ಕಾಡಾನೆಗಳು!

‘ನಿಮ್ಮೂರಲ್ಲಿ ಕಾಡಾನೆ ಹಾವಳಿ ಜಾಸ್ತಿ’ ಎಂಬ ಕಾರಣ ನೀಡಿ ಬೇರೆ ಊರಿನ ಕುಟುಂಬಗಳ ಹೆಣ್ಣುಹೆತ್ತವರು ಹುಡುಗಿ ಕೊಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಯುವಕರ ಅಳಲು. ಹೀಗಾಗಿ ಗಜಪಡೆಗಳ ದಾಳಿಯಿಂದ ಬೇಸತ್ತಿರುವ ಯುವಕರು ತಮ್ಮ ನೋವನ್ನು ಇದೀಗ ‘ಟಿವಿ9’ ಜೊತೆ ಹಂಚಿಕೊಂಡಿದ್ದಾರೆ.

ರೈತರ ಬದುಕಲ್ಲೂ ಬಿರುಗಾಳಿ ಎಬ್ಬಿಸುವ ಕಾಡಾನೆಗಳು

ಕಾಡಾನೆಗಳ ಹಾವಳಿ ರೈತರ ಬದುಕನ್ನೂ ಕಂಗೆಡಿಸಿದೆ. ಮಂಗಳವಾರ ರಾತ್ರಿ ನೆಲಮಲೆ ಗ್ರಾಮದ ಜಗದೀಶ್ ಎಂಬುವವರ ಜಮೀನಿಗೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಸುಮಾರು ಆರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಹಾಗೂ ಮಾವು ಬೆಳೆಯನ್ನು ಸಂಪೂರ್ಣ ನಾಶ ಮಾಡಿವೆ. ಇನ್ನೇನು ಒಂದು ವಾರದಲ್ಲಿ ಕಟಾವು ಮಾಡಬೇಕಿದ್ದ ರಾಗಿ ಬೆಳೆಗೆ ಸುಮಾರು ಎರಡು ಲಕ್ಷ ರೂಪಾಯಿ ಖರ್ಚಾಗಿತ್ತು ಎನ್ನಲಾಗಿದೆ.

ಪ್ರತಿದಿನವೂ ಕಾಡಾನೆಗಳ ದಾಳಿ ನಡೆಯುತ್ತಿರುವುದರಿಂದ ರೈತರು ಆತಂಕದಲ್ಲಿದ್ದು, ಬೆಳೆ ನಷ್ಟದಿಂದ ಆರ್ಥಿಕವಾಗಿ ಕಂಗೆಟ್ಟಿದ್ದಾರೆ. ಈ ನಿರಂತರ ಭೀತಿಯೇ ಗ್ರಾಮದ ಯುವಕರ ಭವಿಷ್ಯಕ್ಕೂ ಕಂಟಕವಾಗಿ ಪರಿಣಮಿಸಿದೆ. ಮದುವೆ ಸಂಬಂಧಗಳಿಗೂ ಅಡ್ಡಿಯಾಗುತ್ತಿದೆ.

ಒಟ್ಟಾರೆ, ಕಾಡಾನೆಗಳ ಹಾವಳಿಯಿಂದ ನೆಲಮಲೆ ಗ್ರಾಮಸ್ಥರು ಕೃಷಿ, ಜೀವನ ಹಾಗೂ ಸಾಮಾಜಿಕ ಬದುಕಿನಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *