ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ.
ಬೆಳಗಾವಿ: ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ, ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಸೇರಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪ್ರದೇಶಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಹೆಸರನ್ನು ಜಿಬಿಎ ಸದಸ್ಯರ ಪಟ್ಟಿಯಲ್ಲಿ ಸೇರಿಸುವ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಇದರೊಂದಿಗೆ, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಎರಡನೇ ತಿದ್ದುಪಡಿಗೆ ಅಂಗೀಕಾರ ದೊರೆತಂತಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ್ದು, ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರುವ ಜನಪ್ರತಿನಿಧಿಗಳ ಹೆಸರು ಜಿಬಿಎ ಸದಸ್ಯರ ಪಟ್ಟಿಯಲ್ಲಿ ಬಿಟ್ಟು ಹೋಗುವುದರಿಂದ ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಮತ್ತು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ವಿಧಾನ ಪರಿಷತ್ ಸದಸ್ಯರನ್ನು ಜಿಬಿಎಸ್ ಸದಸ್ಯರನ್ನಾಗಿ ಸೇರಿಸಲಾಗುವುದು ಎಂದು ತಿಳಿಸಿದರು.
ಸುಧಾಮೂರ್ತಿ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದರೂ, ಸಂಸದ ಸುಧಾಕರ್ ಅವರ ಕ್ಷೇತ್ರದ ಕೆಲವು ಭಾಗ ಜಿಬಿಎ ವ್ಯಾಪ್ತಿಗೆ ಬರುತ್ತಿದ್ದರೂ ಇವರ ಹೆಸರುಗಳು ಜಿಬಿಎ ಸದಸ್ಯರ ಪಟ್ಟಿಯಲ್ಲಿರಲಿಲ್ಲ. ಅಲ್ಲದೆ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರುವ ಜನಪ್ರತಿನಿಧಿಗಳ ಹೆಸರು ಬಿಟ್ಟು ಹೋಗಿತ್ತು. ಹೀಗಾಗಿ ಇವುಗಳನ್ನು ಸೇರ್ಪಡೆ ಮಾಡಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿದೆ.
ಸರ್ಕಾರದ ಈ ಕ್ರಮವನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕೂಡ ಸ್ವಾಗತಿಸಿದ್ದಾರೆ. ಆದರೆ ವಿಧಾನ ಪರಿಷತ್ ಸದಸ್ಯರನ್ನು ಸೇರಿಸುವ ವಿಚಾರದಲ್ಲಿ ಇರುವ ತಾಂತ್ರಿಕ ಸಮಸ್ಯೆಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳು ಬೇರೆ ನಗರಸಭೆ, ಪುರಸಭೆಗಳಿಗೆ ಬದಲಾವಣೆ ಮಾಡಿಕೊಂಡು ಹೋದಂತಹ ಸಂದರ್ಭದಲ್ಲಿ ಅವರು ಎರಡು ಕಡೆ ಮತ ಚಲಾವಣೆ ಮಾಡುವಂತಹ ಆಗಬಾರದು ಎಂದು ಅಶೋಕ್ ಹೇಳಿದ್ದಾರೆ.
ಅಶೋಕ್ ಸಲಹೆಯನ್ನು ಒಪ್ಪಿರುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದು, ಯಾರೇ ಆದರೂ ಒಂದೇ ಕಡೆ ಮತ ಹಾಕಬೇಕು. ಆದರೆ, ಜಿಬಿಎ ಚುನಾಯಿತ ಸಂಸ್ಥೆಯಲ್ಲ ಎಂದು ಹೇಳಿದರು.
For More Updates Join our WhatsApp Group :




