ತಮಿಳುನಾಡಿನ ದೇಗುಲಕ್ಕೆ ಹೋಗಿ ಬರುತ್ತಿದ್ದಒಂದೇ ಕುಟುಂಬದ ಮೂವರು ಸಾ*.
ಬಳ್ಳಾರಿ : ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ದೇವಿನಗರ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ–ಸಿರುಗುಪ್ಪ ರಾಜ್ಯ ಹೆದ್ದಾರಿ (ಎನ್‌ಎಚ್-150)ಯಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ನಿಟ್ಟೂರು ಗ್ರಾಮದ ಪ್ರಸಾದ್ ರಾವ್ ಸೇರಿದಂತೆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ತಕ್ಷಣ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ. ಅತಿವೇಗ ಅಥವಾ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆ ಬದಿಯ ಕಟ್ಟೆಗೆ ಡಿಕ್ಕಿಯಾಗಿ ಪಲ್ಟಿಯಾಗಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದ ಮಾಹಿತಿ ತಿಳಿದ ಕೂಡಲೇ ಸಿರುಗುಪ್ಪ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತರನ್ನು ಪ್ರಸಾದ ರಾವ್, ಸಂದ್ಯಾ ಹಾಗೂ ವಿಜಯಾ ಎಂದು ಗುರುತಿಸಲಾಗಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದುದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
For More Updates Join our WhatsApp Group :




