ಹೆಬ್ಬುಲಿ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಭೀತಿ.
ಚಾಮರಾಜನಗರ : ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಸಂತತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿದೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್, ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದು, ದಿನಕ್ಕೊಂದು ಕಡೆ ವ್ಯಾಘ್ರಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ ಮೂಡಿಸುತ್ತಿವೆ. ಇತ್ತೀಚೆಗೆ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ನ ಕೆ.ಗುಡಿ ಸಮೀಪ ಬೃಹತ್ ಗಂಡು ಹುಲಿ ಪ್ರತ್ಯಕ್ಷವಾಗಿದ್ದು, ತನ್ನ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಓಡಾಟ ನಡೆಸಿದ್ದೇನೋ ಎಂಬ ಅನುಮಾನದಿಂದ ಮರಗಳ ಎಲೆ, ಕೊಂಬೆಗಳ ಬಳಿ ತೆರಳಿ ವಾಸನೆ ಪರಿಶೀಲಿಸುತ್ತಿರುವ ದೃಶ್ಯ ಕಂಡುಬಂದಿದೆ. ಈ ವೇಳೆ ಹುಲಿಯ ಓಡಾಟದ ದೃಶ್ಯವನ್ನು ವಾಹನ ಸವಾರರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ವಿಡಿಯೋದಲ್ಲಿ ಕ್ಯಾಮರಾವನ್ನು ಗಮನಿಸಿದ ಬೃಹತ್ ವ್ಯಾಘ್ರ ಗರ್ಜಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ. ಇದರಿಂದ ಭಯಗೊಂಡ ವಾಹನ ಸವಾರ ಅಲ್ಲಿಂದ ತಕ್ಷಣ ಕಾಲ್ಕಿತ್ತಿದ್ದಾರೆ. ಈ ಬೃಹದಾಕಾರದ ಹುಲಿ ಓಡಾಟದ ವಿಡಿಯೋ ‘ಟಿವಿ9’ಗೆ ಲಭ್ಯವಾಗಿದೆ.
ಅರಣ್ಯ ತಜ್ಞರ ಪ್ರಕಾರ, ಒಂದು ಗಂಡು ಹುಲಿ ಸರಾಸರಿ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ತನ್ನ ಪ್ರಭುತ್ವ ಗುರುತು ಮಾಡಿಕೊಂಡಿರುತ್ತದೆ. ಆ ಪ್ರದೇಶಕ್ಕೆ ಮತ್ತೊಂದು ಗಂಡು ಹುಲಿ ಪ್ರವೇಶಿಸಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಹೆಣ್ಣು ಹುಲಿಗಳನ್ನು ತನ್ನ ವ್ಯಾಪ್ತಿಗೆ ಬಿಟ್ಟುಕೊಳ್ಳುವುದು ಗಂಡು ಹುಲಿಗಳ ಸಹಜ ಗುಣಲಕ್ಷಣವಾಗಿದೆ.
For More Updates Join our WhatsApp Group :




