ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಐಐಟಿ ಬಾಂಬೆಯ ವಿದ್ಯಾರ್ಥಿಗಳು ಈ ಬಾರಿಯೂ ಜಾಕ್ ಪಾಟ್ ಹೊಡೆದಿದ್ದಾರೆ. 22 ವಿದ್ಯಾರ್ಥಿಗಳನ್ನು ವಾರ್ಷಿಕ ಒಂದು ಕೋಟಿ ರೂ.ಗಿಂತ ಹೆಚ್ಚಿನ ಸಂಬಳದ ಉದ್ಯೋಗಗಳಿಗೆ ಆಯ್ಕೆ ಆಗಿದ್ದಾರೆ. 2023-24ರ ನೇಮಕಾತಿ ಋತುವಿನಲ್ಲಿ ಒಟ್ಟು 1,475 ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಈ ಬಾರಿಯ ಸರಾಸರಿ ವೇತನ ಪ್ಯಾಕೇಜ್ 23.50 ಲಕ್ಷ ರೂಪಾಯಿ ಎಂದು ಐಐಟಿ ಬಾಂಬೆ ಹೇಳಿದೆ.
ಈ ವಿಭಾಗದ ವಿದ್ಯಾರ್ಥಿಗಳಿಗೇ ಹೆಚ್ಚಿನ ಅವಕಾಶ: ಐಐಟಿ ಬಾಂಬೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿದ್ದಾರೆ. ಈ ವಿಭಾಗದಲ್ಲೇ ಹೆಚ್ಚಿನ ಉದ್ಯೋಗಗಳು ದೊರೆತಿವೆ. 106 ಕೋರ್ ಇಂಜಿನಿಯರಿಂಗ್ ಕಂಪನಿಗಳಲ್ಲಿ 430 ವಿದ್ಯಾರ್ಥಿಗಳು ಪ್ರವೇಶ ಮಟ್ಟದ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಈ ಉದ್ಯೋಗಗಳಿಗೆ ಸಂಪೂರ್ಣ ಬೇಡಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಋತುವಿನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಟೆಕ್ ವಿಭಾಗದಲ್ಲಿ ಸ್ವಲ್ಪ ಹೆಚ್ಚೇ ಎನ್ನುವಂತೆ ನೇಮಕಾತಿಗಳಾಗಿವೆ. 84 ಕಂಪನಿಗಳು ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ 307 ವಿದ್ಯಾರ್ಥಿಗಳಿಗೆ IT/ಸಾಫ್ಟ್‌ವೇರ್ ಉದ್ಯೋಗಗಳನ್ನು ನೀಡಿವೆ. ಸಾಫ್ಟ್‌ವೇರ್ ವಲಯದಲ್ಲಿ ಹೆಚ್ಚಿನ ನೇಮಕಾತಿಗಳನ್ನು ಮಾಡಲಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆಯೇ ಎಂದು ಹೇಳಲಾಗುತ್ತಿದೆ. ಟ್ರೇಡಿಂಗ್, ಬ್ಯಾಂಕಿಂಗ್, ಫಿನ್‌ಟೆಕ್‌ನಂತಹ 29 ಕನ್ಸಲ್ಟಿಂಗ್ ಕಂಪನಿಗಳು 117 ವಿದ್ಯಾರ್ಥಿಗಳಿಗೆ ಆಫರ್‌ಗಳನ್ನು ನೀಡಿವೆ. 33 ವಿದ್ಯಾರ್ಥಿಗಳು ಆರ್ಥಿಕ ವಲಯದ ಉದ್ಯೋಗಗಳಲ್ಲಿ ಆಯ್ಕೆ ಆಗಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಯಂತ್ರ ಕಲಿಕೆ, ಉತ್ಪನ್ನ ನಿರ್ವಹಣೆ, ಮೊಬಿಲಿಟಿ, 5G, ಡೇಟಾ ಸೈನ್ಸ್, ಡೇಟಾ ಅನಾಲಿಟಿಕ್ಸ್ ಮತ್ತು ಶಿಕ್ಷಣ ಕ್ಷೇತ್ರಗಳಲ್ಲೂ ಕೂಡಾ ಹೆಚ್ಚಿನ ನೇಮಕಾತಿಗಳನ್ನು ಮಾಡಲಾಗಿದೆ.
78 ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ: ಪ್ಲೇಸ್‌ಮೆಂಟ್‌ಗಳಲ್ಲಿ ಭಾಗವಹಿಸಿದ 78 ವಿದ್ಯಾರ್ಥಿಗಳು ಜಪಾನ್, ತೈವಾನ್, ಯುರೋಪ್, ಅಮೆರಿಕ, ನೆದರ್ಲ್ಯಾಂಡ್ಸ್ ಮತ್ತು ಹಾಂ ಕಾಂಗ್‌ನಂತಹ ವಿದೇಶಗಳಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಐಐಟಿ ಬಾಂಬೆ ಹೇಳಿದೆ.
2023-2024ರ ಶೈಕ್ಷಣಿಕ ವರ್ಷದ ನಿಯೋಜನೆಗಳಲ್ಲಿ ಕೋರ್ ಎಂಜಿನಿಯರಿಂಗ್, ಐಟಿ, ಸಾಫ್ಟ್‌ವೇರ್ ಪ್ರೋಗ್ರಾಮಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ಸಲಹೆ, ಹಣಕಾಸು, ಬ್ಯಾಂಕಿಂಗ್, ಉನ್ನತ ತಂತ್ರಜ್ಞಾನ, ತಾಂತ್ರಿಕ ಸೇವೆಗಳಂತಹ ಬಹು ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಗಿಟ್ಟಿಸಿಕೊಂಡಿದ್ದಾರೆ. IIT ಬಾಂಬೆಯಲ್ಲಿ ಪ್ಲೇಸ್‌ಮೆಂಟ್ ಡ್ರೈವ್ ಜುಲೈ 2023 ರಂದು ಪ್ರಾರಂಭವಾಗಿ ಜುಲೈ 7, 2024 ರಂದು ಕೊನೆಗೊಂಡಿದೆ