ದೀರ್ಘಾವಧಿ ಸಿಎಂ ಆಗಲಿರುವ ಸಿದ್ದರಾಮಯ್ಯ.
ಬೆಂಗಳೂರು: ರಾಜ್ಯದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಅವರು ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದ್ದು, ದೇವರಾಜಅರಸು ದಾಖಲೆಯನ್ನು ನಾಳೆ ಮುರಿಯಲಿದ್ದಾರೆ. 7 ವರ್ಷ 239 ದಿನಗಳ ಕಾಲ ಡಿ. ದೇವರಾಜ ಅರಸು ಕರ್ನಾಟಕದ ಸಿಎಂ ಆಗಿದ್ದರು. ಸಿದ್ದರಾಮಯ್ಯ ಕೂಡ ಇಂದಿಗೆ 7 ವರ್ಷ 239 ದಿನ ಪೂರೈಸಿದ್ದಾರೆ. ಮೂರನೇ ಸ್ಥಾನದಲ್ಲಿ ಎಸ್. ನಿಜಲಿಂಗಪ್ಪ ಅವರಿದ್ದು, 7 ವರ್ಷ 175 ದಿನಗಳ ಕಾಲ ಅವರು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 4ನೇ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ 5 ವರ್ಷ 216 ದಿನ ಮತ್ತು 5 ವರ್ಷ 82 ದಿನ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ 5ನೇ ಸ್ಥಾನದಲ್ಲಿದ್ದಾರೆ.
ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರೆ ಸಿದ್ದರಾಮಯ್ಯ ಮೊದಲ ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. 2018ರ ವಿಧಾನ ಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದ ಕಾರಣಕ್ಕೆ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿತ್ತು. ಆದರೆ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ 14 ತಿಂಗಳಿಗೇ ಪತನವಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದರು. ಅದಾದ ಬಳಿಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದ ಕಾರಣ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಬಜೆಟ್ ಮಂಡನೆಯಲ್ಲೂ ದಾಖಲೆ
ಲೋಕದಳ, ಜನತಾ ದಳ ಪಕ್ಷಗಳಲ್ಲಿಯೂ ಈ ಹಿಂದೆ ಇದ್ದ ಸಿದ್ದರಾಮಯ್ಯ 2006ರಲ್ಲಿ ಕಾಂಗ್ರೆಸ್ ಸೇರಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ವಿಪಕ್ಷ ನಾಯಕನಿಂದ ಹಿಡಿದು ಮುಖ್ಯಮಂತ್ರಿ ಕುರ್ಚಿಯನ್ನೂ ಇದೀಗ ಎರಡನೇ ಬಾರಿ ಏರಿ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯ ಬಜೆಟ್ ಮಂಡನೆಯಲ್ಲೂ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದು, ಇದುವರೆಗೂ 16 ಬಜೆಟ್ ಮಂಡಿಸಿದ್ದಾರೆ. ಒಟ್ಟು 13 ಬಜೆಟ್ ಮಂಡಿಸಿರುವ ರಾಮಕೃಷ್ಣ ಹೆಗಡೆ ಎರಡನೇ ಸ್ಥಾನದಲ್ಲಿದ್ದಾರೆ.
For More Updates Join our WhatsApp Group :




