“ನನಗೆ ಇಂತಹ ಸಂಭ್ರಮ ಇಷ್ಟವಿಲ್ಲ”
ವಡೋದರಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳ ವರ್ತನೆಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50ನ ಓವರ್ಗಳಲ್ಲಿ 300 ರನ್ ಕಲೆಹಾಕಿದ್ದರು.
301 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಕಣಕ್ಕಿಳಿದಿದ್ದರು. ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಯಶಸ್ವಿಯಾದರೂ ಹಿಟ್ಮ್ಯಾನ್ ಕೇವಲ 26 ರನ್ಗಳಿಸಿ ಔಟಾಗಿದ್ದರು.
ಇತ್ತ ರೋಹಿತ್ ಶರ್ಮಾ ಔಟಾಗಿ ಪೆವಿಲಿಯನ್ಗೆ ಮರಳುತ್ತಿದ್ದಂತೆ ವಿರಾಟ್ ಕೊಹ್ಲಿ ಮೈದಾನಕ್ಕೆ ಆಗಮಿಸಿದ್ದರು. ಆದರೆ ಅದಕ್ಕೂ ಮುನ್ನ ಬಿಸಿಎ ಸ್ಟೇಡಿಯಂನಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅಂದರೆ ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ ಅಭಿಮಾನಿಗಳು ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಬರಲಿದ್ದಾರೆಂದು ಸಂಭ್ರಮಿಸಲಾರಂಭಿಸಿದ್ದರು.
ಇವೆಲ್ಲನ್ನೂ ಗಮನಿಸಿದ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮ್ಯಾಚ್ ಮುಗಿದ ಬಳಿಕ ಈ ಬಗ್ಗೆ ಮಾತನಾಡಿದ ಕೊಹ್ಲಿ, ಭಾರತ ತಂಡದ ಮೊದಲ ವಿಕೆಟ್ ಬಿದ್ದಾಗ ಎಲ್ಲರೂ ಸಂಭ್ರಮಿಸುತ್ತಿದ್ದರು. ಔಟಾಗಿ ಹೋಗುವ ಬ್ಯಾಟರ್ ಇಂತಹದ್ದೆಲ್ಲಾ ನೋಡಲು ಬಯಸುವುದಿಲ್ಲ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೂ ಇಂತಹ ಸಂಭ್ರಮ ಇಷ್ಟವಾಗುವುದಿಲ್ಲ. ಐಪಿಎಲ್ನಲ್ಲಿ ಮಹೇಂದ್ರ ಸಿಂಗ್ ಧೋನಿ ವಿಚಾರದಲ್ಲೂ ಇದೇ ರೀತಿ ಆಗಿರುವುದನ್ನು ನಾನು ನೋಡಿದ್ದೀನಿ. ಈ ರೀತಿಯ ಸಂಭ್ರಮ ಔಟಾಗಿ ಹೋಗುವ ಬ್ಯಾಟರ್ಗೆ ಉತ್ತಮ ಭಾವನೆ ಮೂಡಿಸುವುದಿಲ್ಲ.
ನನಗಂತೂ ಇಂತಹ ಸಂಭ್ರಮ ನಿಜವಾಗಿಯೂ ಇಷ್ಟವಾಗಲ್ಲ. ಹೀಗಾಗಿ ಇಂತಹ ಸಂಭ್ರಮವನ್ನು ನಿಲ್ಲಿಸಬೇಕೆಂದು ವಿರಾಟ್ ಕೊಹ್ಲಿ ಪರೋಕ್ಷವಾಗಿ ಅಭಿಮಾನಿಗಳಿಗೆ ಸೂಚಿಸಿದ್ದಾರೆ.
For More Updates Join our WhatsApp Group :




