‘ಭೋಜನ ಬಂಡಿ’ಗಳಾಗಿ ಪರಿವರ್ತನೆಗೊಂಡ BMTC ಸ್ಕ್ರ್ಯಾಪ್ ಬಸ್’ಗಳು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಕೆಲ ತಾಂತ್ರಿಕ ಸಿಬ್ಬಂದಿ ಸ್ಕ್ರ್ಯಾಪ್​ ಆದ ಬಸ್ ಅನ್ನು ಮೊಬೈಲ್ ಕ್ಯಾಂಟೀನ್ ಗಳಾಗಿ ಪರಿವರ್ತಿಸಿದ್ದು, ಈ ಮೂಲಕ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

10.64 ಲಕ್ಷ ಕಿ.ಮೀ ಕ್ರಮಿಸಿದ ಉತ್ತರ ವಿಭಾಗಕ್ಕೆ ಸೇರಿದ ಬಿಎಂಟಿಸಿ ಸ್ಟೋರ್ ಬಸ್ ಅನ್ನು ದಾಸನಾಪುರದ ಸೆಂಟ್ರಲ್ ವರ್ಕ್‌ಶಾಪ್-4 ರ ತಾಂತ್ರಿಕ ಮತ್ತು ಇತರೆ ಸಿಬ್ಬಂದಿಗಳು ‘ಭೋಜನ ಬಂಡಿ’ (ಮೊಬೈಲ್ ಕ್ಯಾಂಟೀನ್)ಗಳಾಗಿ ಪರಿವರ್ತಿಸಿದ್ದಾರೆ, ಸಿಬ್ಬಂದಿಗಳ ಈ ಶ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾಂಟಿನ್​ಗಳು ಇಲ್ಲದ ಬಿಎಂಟಿಸಿ ಡಿಪೋಗಳಿಗೆ ಈ ಮೊಬೈಲ್​ ಕ್ಯಾಂಟೀನ್ ಸಿದ್ಧಪಡಿಸಲಾಗಿದೆ. ಹಳೆ BMTC ಬಸ್​ಗಳನ್ನೇ ಕ್ಯಾಂಟೀನ್​ಗಳಾಗಿ ಮಾಡಿದ್ದು, ಇದಕ್ಕೆ ಭೋಜನ ಬಂಡಿ ಎಂದು ಹೆಸರಿಡಲಾಗಿದೆ.

ಈ ಮೊಬೈಲ್ ಕ್ಯಾಂಟೀನ್‌ನಲ್ಲಿ ಆಸನ, ಟೇಬಲ್, ಫ್ಯಾನ್ ಮತ್ತು ವಾಶ್ ಬೇಸಿನ್ ಇದೆ. ಇದಲ್ಲದೆ, ಇದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಹೊಂದಿದೆ. ಕ್ಯಾಂಟೀನ್‌ನ ಮೇಲ್ಭಾಗದಲ್ಲಿ ಗಾಜಿನ ಕಿಟಕಿ ಹೊಂದಿದ್ದು, ಗಾಳಿ ಮತ್ತು ಬೆಳಕು ಬರುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಕುರಿತು ಬಿಎಂಟಿಸಿ ಪ್ರಕಟಣೆ ಹೊರಡಿಸಿದ್ದು, ಸಿಬ್ಬಂದಿಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮೊಬೈಲ್ ಕ್ಯಾಂಟೀನ್‌ಗೆ ‘ಬನ್ನಿ, ಕುಳಿತುಕೊಳ್ಳಿ, ಒಟ್ಟಿಗೆ ಆಹಾರ ಸೇವಿಸೋಣ…ಇದು ತಾಂತ್ರಿಕ ಸಿಬ್ಬಂದಿಯ ಸೃಜನಶೀಲತೆ ಮತ್ತು ಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *