ಮದುವೆಗೆ ಮುನ್ನ ತಾಯಿ ಆದ ನರ್ಸ್.

ಮದುವೆಗೆ ಮುನ್ನ ತಾಯಿ ಆದ ನರ್ಸ್.

ಹುಟ್ಟಿದ ಒಂದೇ ನಿಮಿಷಕ್ಕೆ ಹಸುಗೂಸು ಸಾವು – ಅನುಮಾನಗಳ ಹುತ್ತ.

ಚಿಕ್ಕಮಗಳೂರು: ಮದುವೆಗೂ ಮುನ್ನವೇ ಸ್ಟಾಫ್​​ ನರ್ಸ್​ವೊಬ್ಬರು ತಾಯಿ ಆಗಿದ್ದಾರೆ. ಆದ್ರೆ, ಹರಿಗೆ ಆದ ಒಂದೇ ನಿಮಿಷದಲ್ಲಿ ಹಸುಗೂಸು ಸಾವನ್ನಪ್ಪಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹೌದು… ಚಿಕ್ಕಮಗಳೂರಿನ ತರೀಕೆರೆಯ ಬಾವಿಕೆರೆ ಗ್ರಾಮದ ಸ್ಟಾಫ್ ನರ್ಸ್ ಮದುವೆಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ, ಮಗು ಮೃತಪಟ್ಟಿದ್ದು, ಸಮಾಜದ ಗೌರವಕ್ಕೆ ಅಂಜಿ ಕುಟುಂಬಸ್ಥರೇ ಹಸುಗೂಸನ್ನು ಕೊಲೆ ಮಾಡಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಈ ಸಂಬಂಧ ಲಕ್ಕವಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡ ನರ್ಸ್

ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದು, ಕುಟುಂಬದ ಗೌರವದ ದೃಷ್ಟಿಯಿಂದ ಈ ವಿಷಯವನ್ನು ಗುಟ್ಟಾಗಿಡಲಾಗಿತ್ತು. ಆದ್ರೆ, ಕಳೆದ 15 ದಿನಗಳ ಹಿಂದೆ ಮನೆಯಲ್ಲೇ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋದರೆ ವಿಷಯ ಜಗಜ್ಜಾಹೀರಾಗುತ್ತದೆ ಎಂಬ ಭಯಕ್ಕೆ ನರ್ಸ್ ಆಗಿದ್ದ ಯುವತಿ, ತನ್ನ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಆದ್ರೆ,  ಹುಟ್ಟಿದ ಒಂದೇ ನಿಮಿಷದಲ್ಲೇ ಮಗು ಸಾವನ್ನಪ್ಪಿದೆ. ಹೀಗಾಗಿ ಮರ್ಯಾದೆ ಹೆದರಿ ಮಗುವನ್ನು ಕುಟುಂಬಸ್ಥರೇ ಉಸಿರುಗಟ್ಟಿಸಿ ಕೊಂದಿರಬಹುದು ಎಂದು ಶಂಕಿಸಲಾಗಿದೆ.

ಮಗುವಿನ ಸಾವು ಬಯಲಿಗೆ ಬಂದಿದ್ಹೇಗೆ?

ಇನ್ನು ಮಗು ಸಾವನ್ನಪ್ಪಿದ ಬಳಿಕ ಮೃತದೇವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಹೋಗಿ, ಜನವಸತಿ ಇಲ್ಲದ ತಿಪ್ಪೆಯ ಗುಂಡಿಯೊಂದರಲ್ಲಿ ಹೂತು ಬಂದಿದ್ದಾರೆ. ಆದ್ರೆ, ಇದನ್ನು ತಿಪ್ಪೆ ಗುಂಡಿಯ ಪಕ್ಕದ ಮನೆಯ ಯುವಕ ನೋಡಿದ್ದು, ಏನೋ ಹೂತು ಹಾಕಿರುವ ಬಗ್ಗೆ ಯುವಕನಿಗೆ ಅನುಮಾನ ಮೂಡಿದೆ. ಬಳಿಕ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಮೇರೆಗೆ ಕೂಡಲೇ ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ತಿಪ್ಪೆಯಲ್ಲಿ ಹೂತಿದ್ದ ಮಗುವಿನ ಮೃತದೇಹ ಪತ್ತೆಯಾಗಿದೆ.

ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವ ಪೊಲೀಸರು

ಸದ್ಯ ಪೊಲೀಸರು ಹಸುಗೂಸಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು,ಮರಣೋತ್ತರ ಪರೀಕ್ಷೆ ವರದಿ ಬಳಿಕ ಮಗು ಸಹಜವಾಗಿಯೇ ಉಸಿರುಗಟ್ಟಿ ಸಾವನ್ನಪ್ಪಿದೆಯೋ ಅಥವಾ ಕುಟುಂಬಸ್ಥರೇ ಉಸಿರುಗಟ್ಟಿಸಿ ಕೊಂದಿದ್ದಾರೋ ಎನ್ನುವುದು ಗೊತ್ತಾಗಲಿದೆ. ಹೀಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ.

ಇನ್ನು ಅನುಮಾಸ್ಪದ ಸಾವು ಎಂದು ಪ್ರಕರಣ ದಾಖಲಸಿಕೊಂಡಿರುವ ಪೊಲೀಸರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ಆದ್ರೆ, ಇದುವರೆಗೂ ಯಾರನ್ನೂ ಬಂಧನ ಮಾಡಿಲ್ಲ. ಒಂದು ವೇಳೆ ವರದಿಯಲ್ಲಿ ಮಗುವನ್ನು ಕೊಲೆ ಮಾಡಲಾಗಿದೆ ಎಂದು ದೃಢವಾದರೆ ಕುಟುಂಬಸ್ಥರನ್ನು ಬಂಧಿಸಲಿದ್ದಾರೆ.

ಒಟ್ಟಿನಲ್ಲಿ ಮದುವೆಗೂ ಮುನ್ನವೇ ನರ್ಸ್ ತಾಯಿ ಆಗಿದ್ದು, ಅನಾಯಾಸವಾಗಿ ಕಣ್ಣು ಬಿಟ್ಟು ಪ್ರಪಂಚವನ್ನು ನೋಡುವ ಮೊದಲೇ ಮಗು ಮೃತಪಟ್ಟಿದ್ದು ದುರಂತ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *