ಆನೇಕಲ್‌ನಲ್ಲಿ ಯುವಕನ ಮೇಲೆ ಪುಡಿರೌಡಿಗಳ ದಾಳಿ.
ಆನೇಕಲ್ : ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಯುವಕನನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ನಡುರಸ್ತೆಯಲ್ಲೇ ಯುವಕನ ಮೇಲೆ ಹಲ್ಲೆ ನಡೆಸಿ ಕಾರಿನೊಳಗೆ ಹಾಕಿಕೊಳ್ಳಲು ಪುಡಿರೌಡಿಗಳ ಗ್ಯಾಂಗ್ ಪ್ರಯತ್ನಿಸಿದೆ. ಮೂರು ಬೈಕ್ ಹಾಗೂ ಒಂದು ಕಾರಿನಲ್ಲಿ ಬಂದ ಸುಮಾರು ಎಂಟು ಮಂದಿ ಯುವಕರ ಗ್ಯಾಂಗ್, ರಸ್ತೆಯಲ್ಲಿ ಹೋಗುತ್ತಿದ್ದ ಯುವಕನನ್ನು ತಡೆದು ಕಿಡ್ನಾಪ್ ಮಾಡಲು ಯತ್ನಿಸಿದೆ. ‘ಕ್ಷಮಿಸಿ ತಪ್ಪಾಗಿದೆ, ಬಿಡಿ’ ಎಂದು ಯುವಕ ಮನವಿ ಮಾಡಿಕೊಂಡರೂ ಗ್ಯಾಂಗ್ ಆತನನ್ನು ಬಿಡಲಿಲ್ಲ. ಯುವಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಈ ವೇಳೆ ‘ಇತ್ತೀಚೆಗೆ ಆಪರೇಷನ್ ಆಗಿದೆ, ದಯವಿಟ್ಟು ಬಿಡಿ’ ಎಂದು ಯುವಕ ಅಂಗಲಾಚಿ ಕೇಳಿಕೊಂಡಿದ್ದರೂ ಪುಡಿರೌಡಿಗಳ ಗ್ಯಾಂಗ್ ಕಾರಿನೊಳಗೆ ಎಳೆದು ಹಾಕಲು ಪ್ರಯತ್ನಿಸಿದೆ. ಕಿಡ್ನಾಪರ್‌ಗಳ ಕೈನಿಂದ ತಪ್ಪಿಸಿಕೊಳ್ಳಲು ಯುವಕ ನಾನಾ ರೀತಿಯಲ್ಲಿ ಹೋರಾಡಿದ್ದು, ಕಿರುಚಾಡಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಯುವಕನ ಕಿರುಚಾಟ ಕೇಳಿ ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿ ಪ್ರಶ್ನೆ ಮಾಡುತ್ತಿದ್ದಂತೆ ಪುಡಿರೌಡಿಗಳ ಗ್ಯಾಂಗ್ ಯುವಕನನ್ನು ಬಿಟ್ಟು ಕಾರು ಮತ್ತು ಬೈಕ್‌ಗಳಲ್ಲಿ ಪರಾರಿಯಾಗಿದೆ. ಸಾರ್ವಜನಿಕರ ಮಧ್ಯಸ್ಥಿಕೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
For More Updates Join our WhatsApp Group :




