ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಅಸಮಾಧಾನ.
ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಬೇಸತ್ತು ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪದಿಂದ ನಡೆದ ಕೆಲ ಅಧಿಕಾರಿಗಳ ವರ್ಗಾವಣೆ ಹಾಗೂ ಅಮಾನತು ವಿಚಾರ ಸರ್ಕಾರದೊಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯಿಂದ ಇಂಧನ ಸಚಿವ ಜಾರ್ಜ್ ಬೇಸತ್ತಿದ್ದರು ಎಂಬುದು ತಿಳಿದುಬಂದಿದೆ. ಇಂಧನ ಇಲಾಖೆಯ ಕಾರ್ಯವೈಖರಿಯಲ್ಲಿ ಯತೀಂದ್ರ ಹಸ್ತಕ್ಷೇಪವಿದೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ವರದಿಯಾಗಿದೆ.
ಸಚಿವನಾಗಿ ನನ್ನ ಮಾತಿಗೆ ಬೆಲೆ ಇಲ್ಲ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಜಾರ್ಜ್
ಇಂಧನ ಇಲಾಖೆಯ ಕೆಲ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಿಎಂ ಕಚೇರಿಯಿಂದ ಆದೇಶ ಹೊರಡಿಸಲಾಗಿತ್ತು. ಇದೇ ವೇಳೆ, ಕೆಲವು ಅಧಿಕಾರಿಗಳನ್ನು ಅಮಾನತುಗೊಳಿಸುವ ಬಗ್ಗೆ ಕ್ರಮವನ್ನೂ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಕೆಜೆ ಜಾರ್ಜ್, ‘ಮಂತ್ರಿಯಾಗಿ ನನ್ನ ಮಾತಿಗೆ ಬೆಲೆ ಇಲ್ಲದಿದ್ದರೆ ನಾನು ಏಕೆ ಈ ಸರ್ಕಾರದಲ್ಲಿ ಇರಬೇಕು’ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ್ದರು ಎನ್ನಲಾಗಿದೆ.
ನಿಮ್ಮ ಜತೆ ಇರುತ್ತೇನೆ, ಸರ್ಕಾರದಲ್ಲಿರಲ್ಲ ಎಂದಿದ್ದ ಜಾರ್ಜ್
ಜಾರ್ಜ ಅವರು ‘ನಾನು ನಿಮ್ಮ ಜತೆಗೆ ಇರುತ್ತೇನೆ, ಆದರೆ ಸರ್ಕಾರದಲ್ಲಿ ಇರುವುದಿಲ್ಲ’ ಎಂದು ಹೇಳಿದ್ದರು. ಅಲ್ಲದೆ, ಘಟನೆಯಿಂದ ಮನನೊಂದು ಸಂಪುಟ ಸಭೆಗೆ ಸಹ ಗೈರಾಗಿದ್ದರು ಎಂಬುದು ತಿಳಿದುಬಂದಿದೆ. ಈ ಬೆಳವಣಿಗೆಗಳು ಸರ್ಕಾರದೊಳಗಿನ ಅಸಮಾಧಾನ ಬಹಿರಂಗವಾಗುವಂತೆ ಮಾಡಿದ್ದವು.
ಮಧ್ಯ ಪ್ರವೇಶಿಸಿದ್ದ ಸಿದ್ದರಾಮಯ್ಯ ಆಪ್ತರು
ಘಟನೆಯ ಗಂಭೀರತೆ ಅರಿತ ಸಿಎಂ ಸಿದ್ದರಾಮಯ್ಯ ಆಪ್ತರು ತಕ್ಷಣ ಮಧ್ಯಪ್ರವೇಶಿಸಿದ್ದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಮೂಲಕ ಕೆಜೆ ಜಾರ್ಜ್ ಅವರೊಂದಿಗೆ ಸಂಧಾನ ನಡೆಸಲಾಗಿತ್ತು. ಜಾರ್ಜ್ ಅವರ ಅಸಮಾಧಾನವನ್ನು ಆಲಿಸಿದ ಪೊನ್ನಣ್ಣ ಮಾತುಕತೆ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.
For More Updates Join our WhatsApp Group :




