ವಚನಾನಂದ ಸ್ವಾಮೀಜಿ ಉಚ್ಛಾಟನೆ – ಧರ್ಮದರ್ಶಿ ಸಮಿತಿ ತೀರ್ಮಾನ.
ದಾವಣಗೆರೆ: ‘ಲೆಕ್ಕ ಕೊಡಿ ಅಭಿಯಾನ’ ತೀವ್ರಗೊಂಡ ಬೆನ್ನಲ್ಲೇ ಪಂಚಮಸಾಲಿ ಗುರುಪೀಠದಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ವಚನಾನಂದ ಸ್ವಾಮೀಜಿಯನ್ನು ಗುರುಪೀಠದಿಂದ ಉಚ್ಛಾಟನೆ ಮಾಡಲಾಗಿದೆ. ಗುರುಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಟ್ಟು 15 ಜನ ಇರುವ ಧರ್ಮದರ್ಶಿ ಸಮಿತಿ ಸಭೆಯಲ್ಲಿ 12 ಜನ ಈ ನಿರ್ಧಾರಕ್ಕೆ ಸಹಮತ ಸೂಚಿಸಿದ್ದಾರೆ ಎಂದು ಧರ್ಮದರ್ಶಿ ಸಮಿತಿ ಸದಸ್ಯರಾದ ಬಸವರಾಜ್ ದಿಂಡೂರ ಹಾಗೂ ಬಾವಿ ಬೆಟ್ಟಪ್ಪ ತಿಳಿಸಿದ್ದಾರೆ.
ಇನ್ನು ಧರ್ಮದರ್ಶಿ ಸಮಿತಿಯ ನಿರ್ಧಾರದ ಬಗ್ಗೆಸಂಸ್ಥಾಪಕ ಟ್ರಸ್ಟಿ ಎಚ್. ಪಿ. ಬಸವರಾಜ್ ಕಿಡಿ ಕಾರಿದ್ದಾರೆ. ಸಭೆಯಲ್ಲಿ ವಚನಾನಂದ ಸ್ವಾಮೀಜಿಗಳನ್ನ ಮಠದ ಗುರು ಪೀಠದ ಉಚ್ಛಾಟನೆಗೆ ಸಮಿತಿ ಮುಂದಾದ ಕಾರಣ ಸಭೆಯಿಂದ ನಾನು ಹೊರಬಂದಿದ್ದೇನೆ. ಸಮಿತಿಯ ಈ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಸಭೆ ಕರೆಯುವ ಏಳು ದಿನ ಮೊದಲು ಧರ್ಮದರ್ಶಿ ಸಮಿತಿ ಸದಸ್ಯರಿಗೆ ನೋಟಿಸ್ ಕೊಡಬೇಕು. ಆದ್ರೆ ತಡ ರಾತ್ರಿ ಬಂದು ಸ್ವಾಮೀಜಿಗಳು ಇರುವ ಮಠದ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಜೊತೆಗೆ ಸ್ವಾಮೀಜಿ ವಿರುದ್ಧ ಇರುವ ಆರೋಪ ಪಟ್ಟಿ ಕೊಡಬೇಕು. ಇದ್ಯಾವುದನ್ನೂ ಮಾಡದೆ ಧರ್ಮದರ್ಶಿ ಸಮಿತಿ ಸಭೆ ನಡೆಸಿದೆ ಎಂಬ ಆರೋಪವೂ ಕೇಳಿಬಂದಿದೆ.
ಇಂದು ಬೆಳಿಗ್ಗೆಯಿಂದಲೇ ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿತ್ತು. ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಶೀಲ್ದಾರ್ ಸಂತೋಷ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭಕ್ತರನ್ನು ಮಠದ ಗೇಟ್ ಬಳಿಯೇ ತಡೆಯಲಾಗಿತ್ತು. ಅಲ್ಲದೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಕೂಡ ಪಡೆದಿದ್ದರು.
For More Updates Join our WhatsApp Group :




