ಪೌರಿ ಗರ್ವಾಲ್: ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲಾ ನ್ಯಾಯಾಲಯದ ಆವರಣದ ಬಳಿ ಮರಿಯೊಂದಿಗೆ ದೊಡ್ಡ ಚಿರತೆಯೊಂದು ಕಾಣಿಸಿಕೊಂಡಿರುವುದು ಸಂಚಲನ ಮೂಡಿಸಿದೆ. ಆವರಣದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಕೋರ್ಟ್ ಆವರಣ, ಸರ್ಕ್ಯೂಟ್ ಹೌಸ್ ಹಾಗೂ ಇತರ ವಸತಿ ಬಡಾವಣೆಗಳ ಬಳಿ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅರಣ್ಯ ಇಲಾಖೆಗೆ ಲಿಖಿತ ಹಾಗೂ ಮೌಖಿಕವಾಗಿ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಇದರಿಂದಾಗಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪೌರಿ ಗರ್ವಾಲ್ ಅರಣ್ಯ ವಿಭಾಗದ ನಾಗದೇವ್ ರೇಂಜ್ ಫಾರೆಸ್ಟ್ ಆಫೀಸರ್ ದಿನೇಶ್ ಚಂದ್ರ ನೌಟಿಯಾಲ್ ಮಾತನಾಡಿ, “ಕೋರ್ಟ್ ಆವರಣದಲ್ಲಿ ಚಿರತೆ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಅರಣ್ಯ ಇಲಾಖೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಇದನ್ನು ಹೆಚ್ಚಿಸಲಾಗುವುದು. ಅಗತ್ಯವಿದ್ದರೆ, ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾದ ಸ್ಥಳದಲ್ಲಿ ಬೋನ್ಗಳನ್ನು ಸಹ ಇರಿಸಲಾಗುವುದು” ಎಂದು ತಿಳಿಸಿದರು.