ಮಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು 6 ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮಂಗಳೂರು ಪೊಲೀಸ್ ಇಲಾಖೆ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಕಾರಣ ತನ್ನ ಆರು ವರ್ಷದ ಮಗಳೊಂದಿಗೆ ತಣ್ಣೀರುಬಾವಿ ಬೀಚ್ನಲ್ಲಿ ವೀಡಿಯೋ ಮಾಡಿದ್ದು, ವೈರಲ್ ವೀಡಿಯೋ ಮೂಲಕವೇ ಆತನನ್ನು ಪತ್ತೆ ಹಚ್ಚಿದ ಪೊಲೀಸರು, ಆತನನ್ನು ರಕ್ಷಿಸಿದ್ದಾರೆ.
ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನ
7 ವರ್ಷಗಳ ಹಿಂದೆ ಬಜ್ಪೆ ಪ್ರದೇಶದ ಯುವತಿಯನ್ನು ರಾಜೇಶ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ದಂಪತಿ ನಡವೆ ಇತ್ತೀಚೆಗೆ ಜಗಳಗಳು ಶುರುವಾಗಿದ್ದವು. ಹೆಚ್ಚಾದ ಕೌಟುಂಬಿಕ ಕಲಹದಿಂದ ಬೇಸತ್ತ ರಾಜೇಶ್, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು.
ವೈರಲ್ ವೀಡಿಯೋದಿಂದ ರಾಜೇಶ್ ಪತ್ತೆ
ಮೊದಲಿಗೆ ತನ್ನ 6 ವರ್ಷದ ಮಗಳನ್ನು ಕರೆದುಕೊಂಡು ತಣ್ಣೀರುಬಾವಿ ಬೀಚ್‌ಗೆ ಹೋಗಿದ್ದರು. ಈ ವೇಳೆ ಸಾಯುವುದು ಬೇಡವೆಂದು ಪುಟ್ಟ ಮಗಳು ತನ್ನ ತಂದೆಗೆ ಅಂಗಲಾಚಿ ಬೇಡಿದ್ದಳು. ತನ್ನ ಮಗಳೊಂದಿಗೆ ಆತ್ಮಹತ್ಯೆಗೆ ಸಮುದ್ರ ಕಿನಾರೆಗೆ ತೆರಳುತ್ತಿರುವ ವೀಡಿಯೋ ಮಾಡಿ, ತನ್ನ ಅಕ್ಕ ಹಾಗೂ ಸಂಬಂಧಿಕರಿಗೆ ಕಳುಹಿಸಿದ್ದರು. ಹೀಗೆ ಕಳುಹಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವೈರಲ್ ಆದ ವೀಡಿಯೋ ಸುಳಿವಿನಿಂದ ಸ್ಥಳಕ್ಕೆ ಆಗಮಿಸಿದ್ದ ಪಣಂಬೂರು ಪೊಲೀಸರು, ಬೀಚ್ನಲ್ಲಿ ತಂದೆ ಮಗಳ ಹುಡುಕಾಟ ನಡೆಸಿದ್ದರು. ಎಲ್ಲಿಯೂ ರಾಜೇಶ್ ಸುಳಿವು ಸಿಗದಾಗ ಆತನ ಮೊಬೈಲ್ ಲೊಕೇಷನ್ ಪತ್ತೆ ಮಾಡಿದ ಪೊಲೀಸರು, ಕಾವೂರು ಶಾಂತಿ ನಗರಕ್ಕೆ ರಾಜೇಶ್ ಮನೆ ಹುಡುಕಿಕೊಂಡು ಹೋಗಿದ್ದರು. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಸಿನಿಮೀಯ ರೀತಿಯಲ್ಲಿ ಮನೆ ಬಾಗಿಲು ಮುರಿದು ಒಳ ನುಗ್ಗಿ, ಆತನನ್ನು ರಕ್ಷಿಸಿದ್ದಾರೆ.
For More Updates Join our WhatsApp Group :
