ತುಮಕೂರು: ಇತ್ತಿಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮೂಖ ಜೀವಿಗಳ ಮೇಲೆ ಕಿಡಿಗೇಡಿ ಕೃತ್ಯಗಳು ಹೆಚ್ಚಾಗುತ್ತಿವೆ. ಬೆಂಗಳೂರಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದ ಘಟನೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ತುಮಕೂರಿನಲ್ಲಿ ಹಸುವಿನ ಬಾಲ ಕತ್ತರಿಸಿ ಕಿರಾತಕ ಕೃತ್ಯ ಎಸಗಿದ್ದು, ಕೋಮು ಭಾವನೆ ಕೆರಳಿಸಲು ಈ ಕೆಲಸ ನಡೆದಿದೆ ಎಂದು ಆರೋಪ ಕೇಳಿಬಂದಿದೆ.
ಈಗ ಬಾಲ ತುಂಡರಿ ವಿಕೃತಿ
ಕಳೆದ ವರ್ಷ ಬೆಂಗಳೂರಿನಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದರು. ಆದರೆ ತುಮಕೂರಿನಲ್ಲಿ ಅದೇ ಮಾದರಿಯಲ್ಲಿ ಹಸುವಿಗೆ ಹಿಂಸೆ ನೀಡಲಾಗಿದೆ. ಯಾರೋ ಕಿರಾತಕರು ಹಸುವೊಂದರ ಬಾಲ ಕತ್ತರಿಸಿದ್ದಾರೆ. ಮಾರಕಾಸ್ತ್ರಗಳಿಂದ ಹಸುವಿನ ಬಾಲ ಕೊಯ್ದು ಬಾಲ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಬೀಡಾಡಿ ಹಸುವೊಂದು ತುಮಕೂರು ನಗರ ಅಶೋಕ ನಗರ, ವಿದ್ಯಾನಗರ, ಎಸ್ಐಟಿ ಬಡಾವಣೆಗಳಲ್ಲಿ ಓಡಾಡಿಕೊಂಡಿತ್ತು. ಈ ಬಡಾವಣೆಯ ಅಂಗಡಿ ಮಾಲೀಕರು, ಮನೆಯವರು ಹಸುವಿಗೆ ಧಾನ್ಯವನ್ನು, ಹಣ್ಣುಗಳನ್ನು ಕೊಡುತಿದ್ದರು. ಆದರೆ ಕೆಲ ದಿನಗಳ ಹಿಂದೆ ರಾತ್ರಿವೇಳೆ ಯಾರೋ ಕಿಡಿಗೇಡಿಗಳು ಹಸುವಿನ ಬಾಲವನ್ನು ಮಾರಕಾಸ್ತ್ರಗಳಿಂದ ಕೊಯ್ದು ವಿಕೃತಿ ಮೆರೆದಿದ್ದಾರೆ.
ಬಜರಂಗದಳ ಕಾರ್ಯಕರ್ತರಿಂದ ಹಸುವಿನ ರಕ್ಷಣೆ: ಚಿಕಿತ್ಸೆ
ಕೇವಲ ಹಸುವಿನ ಬಾಲ ಅಷ್ಟೇ ಅಲ್ಲ, ಪೃಷ್ಠ ಭಾಗಕ್ಕೂ ಗಾಯಗೊಳಿಸಲಾಗಿದೆ. ಒಂದೇ ಸಮನೆ ರಕ್ತ ಸುರಿಯುತ್ತಿರುವುದ್ದನ್ನು ಕಂಡ ಸಾರ್ವಜನಿಕರು ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಬಜರಂಗದಳ ಕಾರ್ಯಕರ್ತರು ಪಶು ವೈದ್ಯರನ್ನು ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.
ಪಶು ವೈದ್ಯ ಸಿಬ್ಬಂದಿ ಭರತ್ ರಾಜ್ ಅವರು ಹಸುವಿನ ಬಾಲವನ್ನು ಕತ್ತರಿಸಲಾಗಿದೆ ಎಂದು ಖಾತ್ರಿ ಪಡಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಾಲ ಕತ್ತರಿಸಿದ ಬಳಿಕ ಗಾಯಗಳಾಗಿದ್ದು, ಬಾಲದ ಸುತ್ತ ಇನ್ಫೆಕ್ಷನ್ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಚುಚ್ಚು ಮದ್ದು ನೀಡಿದ್ದಾರೆ.
ಕೋಮು ಭಾವನೆ ಕೆರಳಿಸುವ ಉದ್ದೇಶ
ಹಸುವಿನ ಬಾಲ ಕತ್ತರಿಸಿದರ ಹಿಂದೆ ಕೋಮು ಭಾವನೆ ಕೆರಳಿಸುವ ಉದ್ದೇಶ ಇದೆ ಎನ್ನಲಾಗಿದೆ. ಕೃತ್ಯ ಎಸಗಿದ ಕಿರಾತಕರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ತುಮಕೂರು ನ್ಯೂಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಘಟನೆಯ ಅಸಲಿ ಸಂಗತಿ ಬಯಲಾಗಬೇಕಿದೆ.
For More Updates Join our WhatsApp Group :
