ಗಣೇಶ ಪ್ರತಿಷ್ಠಾಪನೆಗೆ ಮಾರ್ಗಸೂಚಿ ಪ್ರಕಟ: ಈ ನಿಯಮಗಳ ಪಾಲನೆ ಕಡ್ಡಾಯ

ಗಣೇಶ ಪ್ರತಿಷ್ಠಾಪನೆಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಗೌರಿ- ಗಣೇಶ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಈ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಕೂರಿಸುವ ಉಮೇದಿನಲ್ಲಿ ಅನೇಕ ಆಯೋಜನರು, ಸಂಘಟನೆ, ಮಂಡಳಿ, ಸಮಿತಿಗಳಿವೆ. ಗಣೇಶ ಪ್ರತಿಷ್ಠಾಪನೆ ಮತ್ತು ನಿಮಜ್ಜನ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದಾಗಿ ಬೆಂಗಳೂರು ಪೊಲೀಸ್​ ಇಲಾಖೆ ಮತ್ತು ಬಿಬಿಎಂಪಿ ಕೆಲವು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ಬೆಂಗಳೂರಿನ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮತ್ತು ನಿಮಜ್ಜನ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಮಿತಿಯವರು ಹಾಗೂ ಆಯೋಜಕರು ಈ ನಿಬಂಧನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

ಪ್ರತಿಷ್ಠಾಪನೆ ನಿಬಂಧನೆಗಳು:

  • ಸಾರ್ವಜನಿಕ ಸ್ಥಳದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಮೊದಲಿಗೆ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವುದು ಅವಶ್ಯವಾಗಿದೆ. ಮೂರ್ತಿ ಪ್ರತಿಷ್ಠಾಪನೆಯಿಂದ ಸಾರ್ವಜನಿಕರು, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸಾರ್ವಜನಿಕರು ಹಾಗೂ ವಾಹನ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ.
  • ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗಾಗಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆಯನ್ನು ಸಂಗ್ರಹಿಸುವವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
  • ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಾರ್ವಜನಿಕ ಸ್ಥಳದಲ್ಲಿ ಚಪ್ಪರ, ಶಾಮಿಯಾನಗಳನ್ನು ಬಂದೋಬಸ್ತಾಗಿ ನಿರ್ಮಿಸಬೇಕು. ಈ ಬಗ್ಗೆ ಬಿಬಿಎಂಪಿಯಿಂದ ಪರವಾನಗಿ ಪಡೆಯುವುದು ಅವಶ್ಯವಾಗಿದೆ.
  • ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಬಾರದು. ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆದು, ಈ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಬೇಕು.
  • ನ್ಯಾಯಾಲಯದ ನಿರ್ದೇಶನದ ಅನ್ವಯ ಪ್ಲೆಕ್ಸ್ ಮತ್ತು ಬೋರ್ಡ್​​ಗಳನ್ನು ಅಳವಡಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಫ್ಲೆಕ್ಸ್, ಬೋರ್ಡ್​​​ ಹಾಗೂ ಬ್ಯಾನರ್‌ಗಳ ಸಂಬಂಧ ಬಿಬಿಎಂಪಿಯಿಂದ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಗಣೇಶ ವಿಗ್ರಹಗಳ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ದಿನದ 24 ಗಂಟೆಗಳ ಕಾಲ ಇಬ್ಬರು ಜವಾಬ್ದಾರಿಯುತ ಕಾರ್ಯಕರ್ತರು ಇರುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು.
  • ಆಯೋಜಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಆಳವಡಿಸಬೇಕು. ಗಣೇಶ ಮೂರ್ತಿಗಳ ಪ್ರತಿಷ್ಠಾಪನ ಸ್ಥಳಗಳಲ್ಲಿ ಸ್ಥಳೀಯ ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳದ ದೂರವಾಣಿ ಸಂಖ್ಯೆ, ಪದಾಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿರಬೇಕು.
  • ಅಲ್ಲದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ.
  • ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಗೂ ಸುತ್ತಮುತ್ತ ಅಡುಗೆ ಕಟ್ಟಿಗೆ, ಉರುವಲು, ಸೀಮೆ ಎಣ್ಣೆ ಸಾಧನಗಳನ್ನು ಇಡುವಂತಿಲ್ಲ. ಅಡುಗೆ ಮಾಡುವಂತಿಲ್ಲ.
  • ವಿದ್ಯುತ್ ಮತ್ತು ಅಲಂಕಾರದ ವೈರಿಂಗ್ ಬಗ್ಗೆ ಬೆಸ್ಕಾಂ ಇಲಾಖೆಯಿಂದ ಅನುಮತಿ ಪಡೆಯುವುದು ಅವಶ್ಯವಾಗಿದ್ದು, ಅಗ್ನಿಶಾಮಕ ದಳ ಹಾಗೂ ಸಂಚಾರ ಪೊಲೀಸರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು.
  • ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಸ್ಥಳದಲ್ಲಿ ದಿನದ 24 ಗಂಟೆ ಸಮರ್ಪಕ ಬೆಳಕು ಇರುವಂತೆ ನೋಡಿಕೊಳ್ಳಬೇಕು.
  • ಗಣೇಶ ಪ್ರತಿಷ್ಠಾಪನ ಸ್ಥಳಕ್ಕೆ ಸಾರ್ವಜನಿಕರಿಗೋಸ್ಕರ ಸಮರ್ಪಕವಾದ ಆಗಮನ ಮತ್ತು ನಿರ್ಗಮನದ ವ್ಯವಸ್ಥೆಯನ್ನು ಮಾಡಬೇಕು.
  • ಜೊತೆಗೆ ಜನಸಂದಣಿಯನ್ನು ನಿಯಂತ್ರಿಸುವ ಬಗ್ಗೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಸ್ವಯಂ ಸೇವಕರನ್ನು ನೇಮಿಸಿಕೊಂಡು ಯಾವುದೇ ಜನಜಂಗುಳಿಗೆ ಆಸ್ಪದ ನೀಡದಂತೆ ನೋಡಿಕೊಳ್ಳಬೇಕು.
  • ಗಣೇಶ ವಿಗ್ರಹ ಪ್ರತಿಷ್ಠಾಪನೆಯ ಎಲ್ಲಾ ಪರಿಕರಗಳ ರಕ್ಷಣೆಗಾಗಿ ಸದರಿ ಕಾರ್ಯಕ್ರಮಗಳನ್ನು ಆಯೋಜಿಸುವವರೇ ಜವಬ್ದಾರಿರಾಗಿರುತ್ತಾರೆ.
  • ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆಯದಂತೆ ಗಮನಹರಿಸಬೇಕು. ಮೆರವಣಿಗೆ ಸಮಯದಲ್ಲಿ ಯಾವುದೇ ಅಪರಾಧಗಳು ನಡೆದರೆ ಆಯೋಜಕರೆ ಜವಬ್ದಾರರಾಗಿರುತ್ತಾರೆ.
  • ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು ಹಾಗೂ ಕೀಟಲೆ ಮಾಡದಂತೆ ಆಯೋಜಕರೆ ಪೂರ್ಣ ಜವಬ್ದಾರಿಯನ್ನು ವಹಿಸಬೇಕು.
  • ಹಿರಿಯ ನಾಗಕರಿಕರು, ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಬಳಸಿಕೊಳ್ಳಲು ಸ್ಥಳೀಯ ಪೊಲೀಸರ ಅನುಮತಿ ಪಡೆದುಕೊಳ್ಳತಕ್ಕದ್ದು. ಧ್ವನಿವರ್ಧಕಗಳ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿದ್ದು, ಡಿಜೆ ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶವಿಲ್ಲ.
  • ಗಣೇಶ ಮೂರ್ತಿ ಪ್ರತಿಷ್ಠಾಪನ ಮಂಡಳಿಯ ಸಂಘಟಕರು ತಮ್ಮ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರ ಪದಾಧಿಕಾರಿಗಳ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ಒದಗಿಸಬೇಕು.

ವಿಸರ್ಜನಾ ಕಾರ್ಯಕ್ರಮಕ್ಕೆ ನಿಬಂಧನೆಗಳು

  • ಗಣೇಶ ನಿಮಜ್ಜನಾ ಮೆರವಣಿಗೆ ಸಮಯದಲ್ಲಿ ಸ್ವಯಂಸೇವಕರನ್ನು ಗುರುತಿಸಲು ಅವರಿಗೆ ಗುರುತಿನ ಚೀಟಿ, ಬ್ಯಾಡ್ಜ್, ಟೀ-ಶರ್ಟ್ ಅಥವಾ ಕ್ಯಾಪ್‌ಗಳನ್ನು ನೀಡಿರಬೇಕು. ಶಾಂತ ರೀತಿಯಲ್ಲಿ ವಿಸರ್ಜನಾ ಸ್ಥಳಕ್ಕೆ ಹೋಗಲು ಅನುವು ಮಾಡಿಕೊಡಬೇಕು.
  • ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಬೇಕು.
  • ಮೆರವಣಿಗೆಯು ಸೂಕ್ಷ್ಮ, ಅತೀ ಸೂಕ್ಷ್ಮ ಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಮುಂಭಾಗದಲ್ಲಿ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನು ಸಿಡಿಸಬಾರದು ಹಾಗೂ ಕರ್ಪೂರಗಳನ್ನು ಹಚ್ಚಬಾರದು.
  • ಗಣೇಶ ನಿಮಜ್ಜನಾ ಮೆರವಣಿಗೆ ಸಂಬಂಧ ಯಾವುದೇ ಕಾರಣಕ್ಕೂ ಮೆರವಣಿಗೆ ಮಾರ್ಗಗಳನ್ನು ಬದಲಾಯಿಸಬಾರದು. ಬದಲಾಯಿಸಿದ್ದಲ್ಲಿ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು.
  • ಗಣೇಶ ನಿಮಜ್ಜನಾ ಸಂಬಂಧ ಮೆರವಣಿಗೆಯು ರಾತ್ರಿ 10 ಗಂಟೆಯೊಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳತಕ್ಕದ್ದು. ಮೆರವಣಿಗೆ ಸಮಯದಲ್ಲಿ ಎಲೆಕ್ಟಿಕಲ್ ವೈರ್, ಮರದ ಕೊಂಬೆಗಳ ಬಗ್ಗೆ ಗಮನಹರಿಸಿ, ವಿಸರ್ಜನಾ ಮೆರವಣಿಗೆ ಸುಸೂತ್ರವಾಗಿ ಹೋಗಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದಿರಬೇಕು.

Leave a Reply

Your email address will not be published. Required fields are marked *