ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನದ ಸಡಗರ..

ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನದ ಸಡಗರ..

ಕುರ್ಚಿ ಕದನ ಮತ್ತಷ್ಟು ಜೋರಾಗುವ ಸುಳಿವು..

ಬೆಂಗಳೂರು: ಕಾಂಗ್ರೆಸ್​​ನಲ್ಲಿ ಅಧಿಕಾರ ಹಂಚಿಕೆ ಕಿತ್ತಾಟದ ಕಿಡಿ ದಿನೇದಿನೆ ಹೆಚ್ಚುತ್ತಿದೆ. ಸಿಎಂ ಸಿದ್ದರಾಮಯ್ಯ ‘ನಾ ಕೊಡೆ’ ಅಂದರೆ, ಡಿಸಿಎಂ ಡಿಕೆ ಶಿವಕುಮಾರ್ ‘ನಾ ಬಿಡೆ’ ಎಂದು ಪಟ್ಟು ಹಿಡಿದಿದ್ದಾರೆ. ಅದರಲ್ಲೂ ದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡಿ ಬಂದ ಬಳಿಕ ಡಿಕೆಶಿ ವರಸೆಯೇ ಬದಲಾಗಿದೆ. ಬೆಂಗಳೂರಲ್ಲಿ ಶನಿವಾರ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ನಡೆಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವೇದಿಕೆ ಮೇಲೆ ಕೂತಿದ್ದರು. ಸಾಮಾನ್ಯವಾಗಿ ಅಕ್ಕಪಕ್ಕ ಕುಳಿತಿದ್ದಾಗ ಮಾತನಾಡುವುದು ಸಹಜ. ಆದರೆ, ಸಿಎಂ ಹಾಗೂ ಡಿಸಿಎಂ ತುಂಬಾ ಹೊತ್ತು ಮಾತನಾಡಲೇ ಇಲ್ಲ. ಕನಿಷ್ಠಪಕ್ಷ ಪರಸ್ಪರ ಮುಖ ನೋಡುವ ಸಾಹಸಕ್ಕೂ ಕೈ ಹಾಕ್ಲಿಲ್ಲ!

ತುಂಬಾ ಹೊತ್ತಿನ ಬಳಿಕ ಇಬ್ಬರೂ ನದಿ ಮೂಲ ನಿರ್ವಹಣೆ ಪುಸ್ತಕದ ಬಗ್ಗೆ ಅನಿವಾರ್ಯವಾಗಿ ಮಾತನಾಡಿದರು. ಒಟ್ಟಾರೆಯಾಗಿ ಈ ಬೆಳವಣಿಗೆ ‘ಕೈ’ ಒಡಕಿಗೆ ಕನ್ನಡಿ ಹಿಡಿದಿದೆ. ಇದನ್ನು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದು, ದೆಹಲಿಯಿಂದ ರಾಜಕೀಯ ಗನ್ ಹಿಡಿದುಕೊಂಡು ಬಂದಿದ್ದಾರೆ ಎಂದು ಕುಟುಕಿದ್ದಾರೆ.

ವಿಪಕ್ಷಗಳ ಟೀಕೆ, ಪಕ್ಷದೊಳಗೆ ಏನೇ ತಂತ್ರಗಳು ನಡೆದರೂ, ಮೌನಯುದ್ಧ ನಡೆದರೂ ಡಿಕೆ ಶಿವಕುಮಾರ್​​ಗೆ ಮಾತ್ರ ಹೈಕಮಾಂಡ್ ಮೇಲೆ ವಿಶ್ವಾಸ ಹೆಚ್ಚಾದಂತೆ ಕಾಣಿಸುತ್ತಿದೆ. ದೆಹಲಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ, ‘ಏನು ಹೇಳಬೇಕೋ ಅದನ್ನು ವರಿಷ್ಠರಿಗೆ ಹೇಳಿದ್ದೇನೆ’ ಎಂದು ಹೇಳಿದ್ದರು. ಅವರ ಮಾತಿನಲ್ಲಿ ವಿಶ್ವಾಸದ ಬಲ ಮತ್ತಷ್ಟು ಹೆಚ್ಚಾದ್ದಂತೆ ಕಾಣಿಸಿತ್ತು.

ಗುರುವಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂದೆ ಹಕ್ಕು ಮಂಡಿಸಿ ವಾಪಸ್ ಆಗಿರುವ ಡಿಕೆಶಿ, ನಂತರ ಕಾಲವೇ ಉತ್ತರಿಸುತ್ತದೆ ಎಂದಿದ್ದರು. ಇದರೊಂದಿಗೆ, ಫೆಬ್ರವರಿ 17ರ ನಂತರ ಗೇಮ್ ಪ್ಲ್ಯಾನ್ ಚೇಂಜ್ ಆಗಲಿದೆಯೇ ಎಂಬ ಚರ್ಚೆ ಗರಿಗೆದರಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *