ಸಲಿಂಗ ಡೇಟಿಂಗ್ ಆಯಪ್ನಲ್ಲಿ ಪರಿಚಯವಾದ ಯುವಕನಿಗೆ ಹಲ್ಲೆ, ಹಣ ಸುಲಿಗೆ: 6 ಮಂದಿ ಬಂಧನ

ಬೆಂಗಳೂರು: ಡೇಟಿಂಗ್ ಆಯಪ್ನಲ್ಲಿ ಪರಿಚಯವಾಗಿ ಮನೆಗೆ ಕರೆಯಿಸಿಕೊಂಡು ಯುವಕನ ಮೇಲೆ ಹಲ್ಲೆಗೈದು ಸುಲಿಗೆ ಮಾಡಿದ್ದ ಆರು ಮಂದಿಯನ್ನು ನಗರದ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಮೊಹಮ್ಮದ್ ಫರ್ಹಾನ್, ಮೊಹಮ್ಮದ್ ಸಿದ್ದಿಕ್, ಮೊಹಮ್ಮದ್ ಯಾಸೀನ್, ಅಮೀರ್ ಶೇಖ್, ಶಹೀಜ್ ಉಲ್ಲಾ ಹಾಗೂ ಸಯ್ಯದ್ ಅನ್ವರ್ ಎಂಬ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯುವಕ

ಗಿಂಡರ್ ಎಂಬ ಗೇ ಸಲಿಂಗ ಡೇಟಿಂಗ್ ಆಯಪ್ನಲ್ಲಿ ಸಂತ್ರಸ್ತ ಯುವಕನಿಗೆ ಫರ್ಹಾನ್ ಪರಿಚಯವಾಗಿದ್ದ. ಆಯಪ್ ಮೂಲಕ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಇಬ್ಬರು ಚಾಟಿಂಗ್ ಮಾಡುತ್ತಿದ್ದರು. ಒಮ್ಮೆ ಭೇಟಿಯಾಗೋಣ ಎಂದು ತೀರ್ಮಾನಿಸಿದ್ದರು. ಅದರಂತೆ ನವೆಂಬರ್ 22ರಂದು ಸಂಜೆ 4 ಗಂಟೆಗೆ ತಮ್ಮ ಮನೆಗೆ ಫರ್ಹಾನ್ನನ್ನ ಸಂತ್ರಸ್ತ ಯುವಕ ಆಹ್ವಾನಿಸಿದ್ದನು. ಅದರಂತೆ ಫರ್ಹಾನ್ ಮನೆಗೆ ಬಂದು ಉಭಯ ಕುಶಲೋಪರಿ ಮಾತನಾಡಿ, ಕೆಲ ಹೊತ್ತಿನ ಬಳಿಕ ಮನೆಯ ವಾಷ್ ರೂಮ್ಗೆ ತೆರಳಿದ್ದ.

ಫರ್ಹಾನ್ ವಾಷ್ರೂಂಗೆ ತೆರಳಿದ ಕೆಲವೇ ನಿಮಿಷದ ಬಳಿಕ ಐವರು ಆರೋಪಿಗಳು ಸಂತ್ರಸ್ತ ಯುವಕನ ಮನೆಯ ಬಾಗಿಲು ತಟ್ಟಿದ್ದಾರೆ. ಆತಂಕಗೊಂಡ ಬಾಗಿಲು ಬಡಿಯುತ್ತಿದ್ದ ಆರೋಪಿಗಳಿಗೆ ಇಲ್ಲಿಂದ ತೆರಳಿ, ಇಲ್ಲವಾದರೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾನೆ. ಈ ಮಧ್ಯೆ ಶೌಚಾಲಯದಲ್ಲಿದ್ದ ಫರ್ಹಾನ್ ಹೊರಬಂದಿದ್ದಾನೆ. ಸಂತ್ರಸ್ತ ಯುವಕ, ಫರ್ಹಾನ್ಗೆ ಬಾಗಿಲು ತೆಗೆಯದಂತೆ ಸೂಚಿಸಿದರೂ ಆತ ಬಾಗಿಲು ತೆರೆದಿದ್ದಾನೆ.

ಬಾಗಿಲು ತೆರೆಯುತ್ತಿದ್ದಂತೆ ದೊಣ್ಣೆಯಿಂದ ಸಂತ್ರಸ್ತನ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಯುಪಿಐ ಐಡಿ ಮೂಲಕ 2 ಸಾವಿರ ರೂಪಾಯಿ, ಮನೆಯಲ್ಲಿದ್ದ 47 ಸಾವಿರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತರುವಾಯ ನೀಡಿದ ದೂರಿನ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಡಿ.ಜೆ.ಹಳ್ಳಿಯ ಟ್ಯಾನರಿ ರೋಡ್ ನಿವಾಸಿಗಳು. ಫರ್ಹಾನ್ ಮತ್ತು ಸಹಚರರೆಲ್ಲರೂ ಟ್ರಾವೆಲ್ ಹಾಗೂ ಕಾರ್ ಮಾರಾಟ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಬಂಧಿತ ಆರೋಪಿಗಳ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *