ಬೆಂಗಳೂರು: ವೈದ್ಯ ಮಹೇಂದ್ರರೆಡ್ಡಿಯಿಂದ ಪತ್ನಿ ಡಾ.ಕೃತಿಕಾರೆಡ್ಡಿ ಕೊಲೆ ಕೇಸ್ ವಿಚಾರವಾಗಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಗೆದಷ್ಟೂ ಹೊಸ ಹೊಸ ಮಾಹಿತಿಗಳು ಸಿಗುತ್ತಿವೆ. ಆರೋಪಿ ಮಹೇಂದ್ರರೆಡ್ಡಿ ಮೊಬೈಲ್, ಲ್ಯಾಪ್ಟಾಪ್ಗಳನ್ನ ಪೊಲೀಸರು ಪರಿಶೀಲಿಸಿದ್ದು, ಎಫ್ಎಸ್ಎಲ್ಗೆ ರವಾನಿಸಿದ್ದಾರೆ. ಆಪ್ತ ಸ್ನೇಹಿತೆ ಜೊತೆ ಮಹೇಂದ್ರರೆಡ್ಡಿ ಚಾಟಿಂಗ್ ನಡೆಸುತ್ತಿದ್ದ. ಆದರೆ ಪದೇ ಪದೆ ಚಾಟಿಂಗ್ ಮಾಡುತ್ತಿದ್ದಂತೆ ಬೇಸರಗೊಂಡು ಆಕೆ ಈತನನ್ನು ಬ್ಲಾಕ್ ಮಾಡಿದ್ದಳು. ಹೀಗಾಗಿ ಮಹೇಂದ್ರೆಡ್ಡಿ ಬಳಿಕ ಫೋನ್ ಪೇನಲ್ಲಿ ಚಾಟ್ ಮಾಡಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಪೋನ್ ಪೇ ಮೂಲಕವೇ I killed my wife.. because of u ಎಂದು ಸ್ನೇಹಿತೆಗೆ ಮಹೇಂದ್ರರೆಡ್ಡಿ ಮೆಸೇಜ್ ಕಳುಹಿಸಿದ್ದ. ಆ ಬಳಿಕ ಈ ಮೆಸೇಜ್ ಡಿಲೀಟ್ ಮಾಡಲು ತುಂಬಾ ಪ್ರಯತ್ನಿಸಿದ್ದ. ಆದರೆ ಅದು ಸಾಧ್ಯವಾಗದೆ ಈಗ ಲಾಕ್ ಆಗಿದ್ದಾನೆ. ಸ್ನೇಹಿತೆ ಜೊತೆಗಿನ ಪೂರ್ಣ ಚಾಟಿಂಗ್ ಹಿಸ್ಟರಿಯನ್ನ ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದು, ವೈಯಕ್ತಿಕ ವಿಚಾರಗಳ ಬಗ್ಗೆ ಚಾಟಿಂಗ್ ಮಾಡಿರೋದು ಗೊತ್ತಾಗಿದೆ. ಪ್ರಕರಣ ಸಂಬಂಧ ಯುವತಿಯನ್ನ ಕರೆಸಿ ಕರೆಸಿ ಈಗಾಗಲೇ ವಿಚಾರಣೆಯನ್ನೂ ಮಾಡಲಾಗಿದೆ.
ಡಾ. ಕೃತಿಕಾರೆಡ್ಡಿಗಿದ್ದ ಆರೋಗ್ಯ ಸಮಸ್ಯೆಯಿಂದ ಪತಿ ಡಾ. ಮಹೇಂದ್ರರೆಡ್ಡಿ ಬೇಸತ್ತಿದ್ದ. ತನಗೆ ವೈಯಕ್ತಿಕ ಜೀವನ ಇಲ್ಲ ಎಂದು ಕೋಪಕೊಂಡಿದ್ದ. ಹೀಗಂತಾ ವಿಚ್ಛೇದನ ಪಡೆದರೆ ತನಗೆ ಏನು ಸಿಗಲ್ಲ ಎಂಬುದು ಆರೋಪಿಗೆ ಗೊತ್ತಿತ್ತು. ಹಾಗಾಗಿ ಹೆಂಡತಿಯ ಆರೋಗ್ಯ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯೋಜನೆ ಸಿದ್ಧಪಡಿಸಿದ್ದ. ಇದರ ಭಾಗವಾಗಿ ಡಾ.ಕೃತಿಕಾಗೆ ಅನಸ್ತೇಶಿಯಾ ಕೊಟ್ಟಿದ್ದ. ಆಕೆಯ ದೇಹದ ತೂಕಕ್ಕೆ ಕೇವಲ ಏಳರಿಂದ ಎಂಟು ಎಂ.ಎಲ್. ಅನಸ್ತೇಶಿಯಾ ನೀಡಬಹುದಾಗಿತ್ತು. ಇದು ಗೊತ್ತಿದ್ದರೂ ಆ ದಿನ ಹದಿನೈದು ಎಂ.ಎಲ್. ನೀಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಹೀಗಾಗಿ ಆರೋಪಿ ಮಹೇಂದ್ರರೆಡ್ಡಿಯನ್ನ ಪೊಲೀಸರು ಬಂಧಿಸಿದ್ದರು. ಬಳಿಕ ಆತನಿಗೆ ಒಬ್ಬ ಸ್ನೇಹಿತೆಯೂ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
For More Updates Join our WhatsApp Group :
