ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ನಟ ದರ್ಶನ್ ತೂಗುದೀಪ ಹಾಗೂ ನಟಿ ಪವಿತ್ರಾ ಗೌಡ ಸೇರಿ ಇನ್ನಿತರ ಆರೋಪಿಗಳ ಜಾಮೀನು ಅರ್ಜಿಯು ಇಂದು ಡಿಸೆಂಬರ್ 6ರಂದು ಶುಕ್ರವಾರ ಹೈಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ. ಇಂದು ಮತ್ತೆ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಆರೋಪಿಗಳ ವಿರುದ್ಧ ವಾದ ಮಂಡನೆ ಮಾಡಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಬಂಧನ ದಿನದಿಂದ ಪರಪ್ಪನ ಅಗ್ರಹಾರದಲ್ಲಿದ್ದು, ಈ ಹಿಂದೆ ಕೆಳ ನ್ಯಾಯಾಲಯದಲ್ಲಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಎ2 ಆರೋಪಿ ನಟ ದರ್ಶನ್ ಅನಾರೋಗ್ಯ ಕಾರಣದಿಂದ ಆರು ವಾರಗಳ ಜಾಮೀನು ಪಡೆದಿದ್ದಾರೆ. ಪ್ರಕರಣದಿಂದ ರೆಗ್ಯೂಲರ್ ಜಾಮೀನು ನೀಡುವಂತೆ ಅವರು ಸಾಮಾನ್ಯ ಜಾಮೀನು ಅರ್ಜಿ ಸಲ್ಲಿಸಿದ್ದರು.
ಈ ಎರಡು ಆರೋಪಿಗಳು ಸೇರಿದಂತೆ ಡಿ.ಗ್ಯಾಂಗ್ ಇತರ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯು ಶುಕ್ರವಾರ ಹೈಕೋರ್ಟ್ನಲ್ಲಿ ನಡೆಯಲಿದೆ. ಪವಿತ್ರಾ ಗೌಡ ಹಾಗೂ ದರ್ಶನ್ ಇಂದು ಜಾಮೀನು ಸಿಗುವ ನಿರೀಕ್ಷೆ ಹೊಂದಿದ್ದಾರೆ. ಅವರಿಗೆ ಜಾಮೀನು ಸಿಗುತ್ತಾ? ಅಥವಾ ಸದ್ಯಕ್ಕೆ ಜೈಲೆ ಗತಿಯೇ? ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
ಡಿ.3ರಂದು ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಪೀಠವು ವಾದ ವಿವಾದ ಆಲಿಸಿತ್ತು. ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಹಾಗೂ ಪವಿತ್ರಾ ಗೌಡ ಪರ ವಕೀಲ ಸೆಬಾಷ್ಟಿನ್ ಅವರು ತಮ್ಮ ಕಕ್ಷಿದಾರರ ಪಾತ್ರ ಇದರಲ್ಲಿಲ್ಲ. ಅವರಿಗೆ ಜಾಮೀನು ನೀಡುವಂತೆ ಕೆಲ ಹೊತ್ತು ವಾದ ಮಂಡಿಸಿದ್ದರು. ಬಳಿಕ ಕೋರ್ಟ್ ಅರ್ಜಿ ವಿಚಾರಣೆಯನ್ನು ಇಂದು ಶುಕ್ರವಾರಕ್ಕೆ ಮುಂದೂಡಿತು.
ಇಂದು ಪ್ರಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ವಾದ ಮಾಡಲಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡದಂತೆ ಮಹತ್ವದ ಅಂಶಗಳನ್ನು ಪ್ರಸ್ತಾಪಿಸಲಿದ್ದಾರೆ. ಹೀಗಾಗಿ ಇಂದಿನ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯು ಕುತೂಹಲ ಹೆಚ್ಚಾಗುವಂತೆ ಮಾಡಿದೆ.