ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಾಲ್ಮೀಕಿ ಹಾಗೂ ಮುಡಾ ಹಗರಣಗಳ ವಿಷಯಾಂತರ ಮಾಡಲು ನಟ ದರ್ಶನ್ ಕೇಸ್ ಮುನ್ನೆಲೆಗೆ ತಂದು ಸಂಕುಚಿತ ಷಡ್ಯಂತ್ರ ನಡೆಸಿದೆ. ಈ ಕೇಸ್‌ಗೆ ಸಂಬಂಧಿಸಿದ ಫೋಟೋಗಳನ್ನು ವೈರಲ್ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಿನ್ನೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಈ ಆರೋಪ ಮಾಡಿದ್ದು, ರೇಣುಕಾಸ್ವಾಮಿ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ ಸರ್ಕಾರ ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ತನ್ನ ತಪ್ಪನ್ನು ಮುಚ್ಚಿ ಹಾಕಲು ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ದರ್ಶನ್ ಪ್ರಕರಣ ಬಳಸಿಕೊಳ್ಳುತ್ತಿದೆ ಎಂದರು.
ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿರುವ ಫೋಟೋಗಳನ್ನು ವೈರಲ್ ಮಾಡಿರುವ ಬಗ್ಗೆ ನ್ಯಾಯಾಲಯವೂ ಪರಿಗಣನೆಗೆ ತೆಗೆದುಕೊಂಡು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದರ್ಶನ್ ಫೋಟೋ ವೈರಲ್ ಮಾಡಿದ್ದು ಯಾರು?: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗುತ್ತಿದ್ದ ಫೋಟೋ ವೈರಲ್ ಆಗಿದ್ದು ಹೇಗೆ ಹಾಗೂ ಇದಕ್ಕೆ ಪ್ರಮುಖ ಸೂತ್ರದಾರರು ಯಾರು ಎಂದು ಜೋಶಿ ಕೇಳಿದರು.
ಪರಪ್ಪನ ಅಗ್ರಹಾರದ ದರ್ಶನ್ ಪೋಟೋ ಹೊರಗಡೆ ಬಿಟ್ಟಿರುವುದು ರಾಜ್ಯ ಸರ್ಕಾರವೇ. ದರ್ಶನ್ ಪ್ರಕರಣ ಸಾಕಷ್ಟು ಚರ್ಚೆಗೆ ಬಂದಿದ್ದ ವಿಷಯವಾಗಿತ್ತು. ಆದರೆ, ಮುಡಾ ವಾಲ್ಮೀಕಿ ಪ್ರಕರಣ ಮುನ್ನೆಲೆಗೆ ಬಂದಾಗ ಎಲ್ಲ ಮಾಧ್ಯಮದಲ್ಲಿಯೂ ಸಾಕಷ್ಟು ಚರ್ಚೆಗೆ ಬಂದಿತ್ತು. ಇದನ್ನು ಡೈವರ್ಟ್ ಮಾಡಲು ಇಂತಹದೊಂದು ಪೋಟೋ ವೈರಲ್ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಆರೋಪ ಮಾಡಿದರು.
ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ ವರದಿ ಇಟ್ಟುಕೊಂಡು ತನಿಖೆಗೆ ಮುಂದಾಗಿರುವುದು ಅಚ್ಚರಿಯನ್ನುಂಟುಮಾಡುತ್ತಿದೆ. ಒಂದೂವರೆ ವರ್ಷದಿಂದ ಸುಮ್ಮನಿದ್ದ ಸರಕಾರ ಈಗ ಹಗರಣದ ಬಗ್ಗೆ ಮಾತನಾಡುತ್ತಿದೆ. ಸರಕಾರ ಕಳ್ಳತನ ಮಾಡಿ ಸಿಕ್ಕಿಬಿದ್ದಾಗ ಇನ್ನೊಬ್ಬರು ಕೂಡ ಕಳ್ಳತನ ಮಾಡಿದ್ದಾರೆ ಎಂದು ತೋರಿಸುತ್ತ ಬಚಾವಾಗುವ ತಂತ್ರವೇ? ಎಂದು ಪ್ರಶ್ನಿಸಿದ ಜೋಶಿ, ಇದೆಲ್ಲ ನಮ್ಮಲ್ಲಿ ನಡೆಯುವುದಿಲ್ಲ ಎಂದರು.
FSSAI , ಫುಡ್ ಸೆಕ್ಯೂರಿಟಿ ಆ್ಯಂಡ್ ಸೇಫ್ಟಿ ಸ್ಟಾಂಡರ್ಡ್ಸ್ ಮೂಲಕ ಪ್ರಮಾಣೀಕರಿಸಲಾದ ಸಂಸ್ಥೆ/ಏಜೆನ್ಸಿಗಳು ಮಾತ್ರ ಗಣೇಶನ ಪೆಂಡಾಲುಗಳಲ್ಲಿ ಪ್ರಸಾದ ಪೂರೈಕೆ ಮಾಡಬೇಕು ಎಂದು ಕರ್ನಾಟಕ ಆಹಾರ ಇಲಾಖೆ ಆದೇಶವನ್ನು ಹೊರಡಿಸಿರುವುದು ಸಮಸ್ತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಆದೇಶವಾಗಿದೆ ಎಂದು ಕೂಡ ಹೇಳಿದರು.