ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕಗೊಳ್ಳುವ ನಿರೀಕ್ಷೆ ಇದೆ. ಹಾಲಿ ಮುಖ್ಯ ಕಾರ್ಯದರ್ಶಿಯಾಗಿರುವ ರಜನೀಶ್ ಗೋಯೆಲ್ ಅವಧಿ ಜುಲೈ 31ಕ್ಕೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ.
1986ರ ಬ್ಯಾಚ್ನ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಪತ್ನಿ ಶಾಲಿನಿ ರಜನೀಶ್ ಹೆಸರು ಮುಂದಿನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿ ಬರುತ್ತಿದೆ.
ಜೇಷ್ಠತೆಯ ಆಧಾರದ ಮೇಲೆ ಶಾಲಿನಿ ರಜನೀಶ್, ಅಜಯ್ ಸೇಠ್ ಹೆಸರು ಇದೆ. ಇಬ್ಬರ ಪೈಕಿ ಶಾಲಿನಿ ರಜನೀಶ್ ಅವರೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ.
ಉನ್ನತ ಹುದ್ದೆಯಲ್ಲಿ ದಂಪತಿಗಳ ಕಾರ್ಯ: ಕರ್ನಾಟಕದ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕಗೊಂಡರೆ ರಾಜ್ಯದ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ದಂಪತಿ ಎಂಬ ಹೆಗ್ಗಳಿಕೆ ಶಾಲಿನಿ ರಜನೀಶ್ ಮತ್ತು ರಜನೀಶ್ ಗೋಯೆಲ್ ಅವರದ್ದಾಗಲಿದೆ.
1989ನೇ ಬ್ಯಾಚ್ನ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಮತ್ತು ಅಜಯ್ ಸೇಠ್ ಹೆಸರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿ ಬರುತ್ತಿದೆ. ಶಾಲಿನಿ ರಜನೀಶ್ ಅವರು 2027ರ ಜೂನ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಸುದೀರ್ಘ ಅಧಿಕಾರ ಅವಧಿ ಇರುವ ಅಧಿಕಾರಿಯನ್ನು ನೇಮಕ ಮಾಡಿದರೆ ಆಡಳಿತ ಯಂತ್ರ ಸುಗಮವಾಗಿ ಸಾಗಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ಇದೆ.
ಜೇಷ್ಠತೆಯ ಆಧಾರದ ಮೇಲೆ ಅಜಯ್ ಸೇಠ್ ಹೆಸರು ಕೇಳಿ ಬರುತ್ತಿದೆ. ಪ್ರಸ್ತುತ ಅವರು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ. ಅವರ ಅಧಿಕಾರಾವಧಿ 2025ರ ಜೂನ್ಗೆ ಮುಕ್ತಾಯಗೊಳ್ಳಲಿದೆ.