ಬಳ್ಳಾರಿ: ನಟ ದರ್ಶನ್ ಅವರು ಧರಿಸಿರುವುದು ಕೂಲಿಂಕ್ ಗ್ಲಾಸ್ ಅಲ್ಲ. ಅದು ಪವರ್ ಗ್ಲಾಸ್. ಕಣ್ಣಿನ ಸಮಸ್ಯೆ ಇದ್ರೆ ಇದನ್ನು ಧರಿಸುವುದಕ್ಕೆ ಅವಕಾಶವಿದೆ. ಆದರೂ ಕೂಡ ವೈದ್ಯರು ಗ್ಲಾಸ್ನ ಪವರ್ ಪರೀಕ್ಷೆ ಮಾಡಲಿದ್ದಾರೆ ಎಂದು ಬಳ್ಳಾರಿ ಎಸ್ಪಿ ಶೋಭಾ ರಾಣಿ ತಿಳಿಸಿದರು.
ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಎಸ್ಪಿ ಶೋಭಾ ರಾಣಿ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರೂಟಿನ್ನಂತೆ ಇಂದು ಕೂಡ ಜೈಲಿಗೆ ಭೇಟಿ ನೀಡಿದ್ದೇನೆ. ಕಾರಾಗೃಹದ ಅಧೀಕ್ಷಕರ ಕೊಠಡಿಗೆ ತೆರಳಿ ಮಾತನಾಡಿದ್ದೇನೆ. ದರ್ಶನ್ ಅವರನ್ನು ಭೇಟಿಯಾಗಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದರು.
ಇನ್ನು, ದರ್ಶನ್ ಕುರಿತ ವದಂತಿಗಳ ಬಗ್ಗೆ ಉತ್ತರಿಸಿ, ದರ್ಶನ್ ಅವರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ಕುರಿತ ವದಂತಿಗಳು ಸುಳ್ಳು. ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ದರ್ಶನ್ ಅವರ ಕೈಗೆ ಬೇಡಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಎಸ್ಪಿ, ದರ್ಶನ್ ಅವರಿಗೆ ಬೇಡಿ ಹಾಕಿಲ್ಲ. ಕೈಗೆ ನೋವಾಗಿರೋದ್ರಿಂದ ಬಟ್ಟೆ ಕಟ್ಟಿಕೊಂಡಿದ್ದರು. ಅದು ಬೇಡಿ ಅಲ್ಲ. ಜೊತೆಗೆ ಕೈಗೆ ಹಾಕಿದ್ದ ಕಡಗ, ದಾರ ಮತ್ತು ಚೈನ್ಗಳನ್ನು ಪರಿಶೀಲನೆ ವೇಳೆ ತೆಗೆಸಲಾಗಿದೆ ಎಂದು ತಿಳಿಸಿದರು.
ವಿಚಾರಾಧೀನ ಕೈದಿ ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು. ಆದರೆ ಶಿಕ್ಷೆಯಾಗಿರೋ ಕೈದಿಗೆ ಆ ರೀತಿಯಲ್ಲಿ ಅವಕಾಶ ಇರೋದಿಲ್ಲ. ಇನ್ನು ದರ್ಶನ್ ಅವರಿಗೆ ಊಟ ನೀಡಲಾಗಿದ್ದು, ಜೈಲಿನ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.