ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಡಿಕ್ಕಿ ಹೊಡೆದ ಗೂಡ್ಸ್​ ರೈಲು: ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಡಾರ್ಜಿಲಿಂಗ್​: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್​ ಜಿಲ್ಲೆಯ ಅಸ್ಸಾಂನ ಸಿಲ್ಚಾರ್​ನಿಂದ ಕಲ್ಕತ್ತಾಗೆ ತೆರಳುತ್ತಿದ್ದ ಕಾಂಚನಜುಂಗಾ ಎಕ್ಸ್​ಪ್ರೆಸ್​ ರೈಲಿಗೆ, ಗೂಡ್ಸ್​ ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಾಗೂ 60ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ನ್ಯೂ ಜಲ್ಪೈಗುರಿಗೆ ಸಮೀಪವಿರುವ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್​ ರೈಲು, ಪ್ಯಾಸೆಂಜರ್​ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಪ್ಯಾಸೆಂಜರ್​ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, 15ಕ್ಕೂ ಹೆಚ್ಚು ಆಂಬ್ಯಲೆನ್ಸ್​ಗಳು ಸ್ಥಳದಲ್ಲಿವೆ.

ಕಾಂಚನಜುಂಗಾ ಎಕ್ಸ್​ಪ್ರೆಸ್​ ಅಸ್ಸಾಂನ ಸಿಲ್ಚಾರ್​ನಿಂದ ಕಲ್ಕತ್ತಾದ ಸೀಲ್ದಾ ಮಧ್ಯೆ ಚಲಿಸುತ್ತದೆ. ಸೀಲ್ದಾ​ಗೆ ಬರುತ್ತಿದ್ದ ವೇಳೆ ಇಂದು ಬೆಳಗ್ಗೆ 8.45ರ ಸುಮಾರಿಗೆ ನ್ಯೂ ಜಲ್ಪೈಗುರಿ ಜಂಕ್ಷನ್​ ಮುಂದೆ ಕತಿಹಾರ್​ ರೈಲ್ವೆ ವಿಭಾಗದ ರಂಗಪಾಣಿ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಈಶಾನ್ಯ ಫ್ರಾಂಟಿಯರ್​ ರೈಲ್ವೆಯ(NFR) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡಿ. ತಿಳಿಸಿದ್ದಾರೆ.

“NFR ವಲಯದಲ್ಲಿ ದುರದೃಷ್ಟಕರ ಅಪಘಾತ ಸಂಭವಿಸಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ರೈಲ್ವೆ, NDRF​ ಮತ್ತು SDRF​ ನಿಕಟ ಸಮನ್ವಯದಲ್ಲಿ ರಕ್ಷಣಾ ಕಾರ್ಯವನ್ನು ಮಾಡುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ” ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್​ ಖಾತೆಯಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *