ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿನ ಆರೋಗ್ಯಾಧಿಕಾರಿ ಹುದ್ದೆಯನ್ನು ಸರ್ಕಾರ ರದ್ದುಪಡಿಸಿದೆ. ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ಎಲ್ಲ ಪಾಲಿಕೆಗಳಲ್ಲಿ 18 ಆರೋಗ್ಯಾಧಿಕಾರಿ ಹುದ್ದೆಗಳನ್ನು ರದ್ದುಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
18 ಆರೋಗ್ಯಾಧಿಕಾರಿ ಹುದ್ದೆಗಳು ರದ್ದು
ರಾಜ್ಯದ ಹಲವು ಮಹಾನಗರ ಪಾಲಿಕೆಗಳು ತಮ್ಮದೇ ಅನುದಾನಗಳಿಂದ ಆರೋಗ್ಯ ಕೇಂದ್ರಗಳನ್ನು ನಡೆಸುತ್ತವೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಯುಪಿಎಚ್‌ಸಿ) ಮೂಲಕ ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತದೆ ಮತ್ತು ಚಿಟಗುಪ್ಪಿ ಆಸ್ಪತ್ರೆ ಮತ್ತು ಹೆರಿಗೆ ಆಸ್ಪತ್ರೆಯನ್ನು ನಿರ್ವಹಿಸುತ್ತದೆ. ಈ ಆರೋಗ್ಯ ಕೇಂದ್ರಗಳ ನಿರ್ವಹಣೆಗಾಗಿ ಆರೋಗ್ಯಾಧಿಕರಿಗಳನ್ನು ನೇಮಕ ಮಾಡಿ, ಪಾಲಿಕೆಯ ಆರೋಗ್ಯ ವಿಭಾಗದ ಎಲ್ಲಾ ಚಟುವಟಿಕೆಗಳನ್ನು ಅವರಿಗೆ ವಹಿಸಲಾಗುತ್ತಿತ್ತು.
ಹೊಸ ಆದೇಶದಂತೆ ಜಿಬಿಎ ಹೊರತುಪಡಿಸಿ ಉಳಿದ ಪಾಲಿಕೆಗಳ 18 ಆರೋಗ್ಯಾಧಿಕಾರಿ ಹುದ್ದೆಗಳನ್ನು ರದ್ದುಪಡಿಸಿ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸೀನಿಯರ್ ಪ್ರೋಗ್ರಾಮರ್ ಮತ್ತು ಆಡಳಿತಾಧಿಕಾರಿ ಹುದ್ದೆಗಳಾಗಿ ಮರುನಾಮಕರಣ ಮಾಡಲಾಗಿದೆ. ಆರೋಗ್ಯ ವಿಭಾಗದ ಕೆಲಸ ಕಾರ್ಯಪಾಲಕ ಇಂಜಿನಿಯರ್‌ಗಳ ಅಧೀನದಲ್ಲಿ ಮುಂದುವರಿಯಲಿದೆ. ಹುದ್ದೆ ಮರುನಾಮಕರಣವಾದರೂ ಸಿಬ್ಬಂದಿಯ ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಕುರಿತು ಅಗತ್ಯವಾದ ಟಿಪ್ಪಣಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ.
For More Updates Join our WhatsApp Group :



