ದೇವನಹಳ್ಳಿ: “ಜ್ಞಾನ, ತಂತ್ರಜ್ಞಾನದ ನಗರವಾಗಿ ಬೆಂಗಳೂರು ಗುರುತಿಸಿಕೊಂಡಿದೆ. ಏರೋಸ್ಪೇಸ್ ತಂತ್ರಜ್ಞಾನದ ಹಲವಾರು ಪಂಡಿತರು ಬೆಂಗಳೂರನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ. ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್ ನಲ್ಲಿರುವ ಕಾಲಿನ್ಸ್ ಇಂಡಿಯಾ ಆಪರೇಶನ್ ಸೆಂಟರ್ ನ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.”ಪ್ರತಿ ವರ್ಷ 1.50 ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಾಜ್ಯದಿಂದ ಹೊರಹೊಮ್ಮುತ್ತಿದ್ದಾರೆ. ಭಾರತವನ್ನು ಬೆಂಗಳೂರು ಮೂಲಕ ನೋಡಲಾಗುತ್ತಿದೆ” ಎಂದರು.
“ನಮ್ಮ ದೇಶದ ಆಗಸದಲ್ಲಿ ಸಾವಿರಾರು ವಿಮಾನಗಳು ಹಾರಾಟ ನಡೆಸುತ್ತಿವೆ. ಆಕಾಶಕ್ಕೆ ಯಾವುದೇ ಮಿತಿಯಿಲ್ಲ. ಈ ಏರೋಸ್ಪೇಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪ್ರಸ್ತುತ ಕಂಪೆನಿಗೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ. ಇದರ ಜೊತೆಗೆ ಕರ್ನಾಟಕದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಗಮನ ಹರಿಸಬೇಕು” ಎಂದರು.
“ಇಲ್ಲಿನ ಮಾನವ ಸಂಪನ್ಮೂಲ, ಮಣ್ಣು, ವಾತಾವರಣ, ಪರಿಸರವನ್ನು ಆಯ್ಕೆ ಮಾಡಿಕೊಂಡ ಕಾರಣಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ಆದ ಕಾರಣಕ್ಕೆ ಕಾಲಿನ್ಸ್ ಏರೋಸ್ಪೇಸ್ ಕಂಪೆನಿಗೆ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಖ್ಯಮಂತ್ರಿಯವರಿಂದ ಹಿಡಿದು ಈ ವಿಚಾರವಾಗಿ ಸಂಬಂಧಿಸಿದ ಎಲ್ಲರೂ ನಿಮ್ಮ ಜೊತೆಗಿದ್ದೇವೆ” ಎಂದರು.
“ನಮ್ಮ ಸರ್ಕಾರವೂ ಉದ್ಯೋಗದಾತರಿಗೆ ಸದಾ ಬೆಂಬಲ ನೀಡಲಿದೆ. ಯಾವುದೇ ವಿಚಾರವಿದ್ದರೂ ನಾವಿದ್ದೇವೆ. ಸರ್ಕಾರದ ಬಾಗಿಲು ಸದಾ ತೆರೆದಿರುತ್ತದೆ” ಎಂದರು.
For More Updates Join our WhatsApp Group :
