ಅಹಮದಾಬಾದ್: ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಹೊಸ ಹೊಸ ಪ್ರತಿಭೆಗಳು ಗುರುತಿಸಿಕೊಳ್ಳುತ್ತಿವೆ. ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ , ಗುಜರಾತ್ ಟೈಟನ್ಸ್ ನಡುವಿನ ಜಿದ್ದಾಜಿದ್ದಿ ಕಣದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ವೈಶಾಖ್ ವಿಜಯ್ ಕುಮಾರ್ ತಮ್ಮ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ.

ಹೌದು. 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದ ಪಂಜಾಬ್, ಟೈಟನ್ಸ್ ವಿರುದ್ಧ ಕೇವಲ 11 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆದ್ರೆ ಈ ರೋಚಕ ಗೆಲುವಿಗೆ ಕಾರಣವಾಗಿದ್ದು, ಕನ್ನಡಿಗ ವೈಶಾಖ್ ವಿಜಯ್ ಕುಮಾರ್. ಯಾವುದೇ ವಿಕೆಟ್ ಪಡೆಯದಿದ್ದರೂ ತಮ್ಮ ಬೌಲಿಂಗ್ ಸಾಮರ್ಥ್ಯದಿಂದ ಹೆಚ್ಚು ರನ್ ಬಿಟ್ಟುಕೊಡದೇ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 3 ಓವರ್‌ಗಳಲ್ಲಿ 28 ರನ್ ಬಿಟ್ಟುಕೊಟ್ಟು ತಂಡವನ್ನು ಗೆಲುವಿನ ದಡ ಸೇರಿಸಿದರು.
ಇನ್ನು ಪಂದ್ಯದ ಬಳಿಕ ಕನ್ನಡದಲ್ಲೇ ಮಾತನಾಡಿದ ವೈಶಾಖ್, ಫೀಲ್ಡ್ ಸೆಟ್ಟಿಂಗ್ ಮೊದಲೇ ಪ್ಲ್ಯಾನ್ ಮಾಡಿದ್ದೆವು. ಪ್ರಾಕ್ಟಿಸ್ ಪಂದ್ಯದಲ್ಲೇ ಈ ಬಗ್ಗೆ ಯೋಜನೆ ರೂಪಿಸಿದ್ದೆವು. ಅದೇ ರೀತಿ ಪಂದ್ಯದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿದೆವು. ಅದು ಪಂದ್ಯ ಗೆಲ್ಲಲು ಸಹಾಯವಾಯಿತು. ಖಂಡಿತವಾಗಿಯೂ ನಾವು ಗೆಲ್ಲುತ್ತೇವೆ ಎಂದರು.
ವೈಶಾಖ್ ವಿಜಯ್ ಕುಮಾರ್ ಯಾರು?
ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ ಹಲವು ಟೂರ್ನಿಗಳಲ್ಲಿ ಆಡಿರುವ ವೈಶಾಖ್ ವಿಜಯ್ ಕುಮಾರ್, 26 ವರ್ಷ ವಯಸ್ಸಿನ ಬಲಗೈ ವೇಗದ ಬೌಲರ್. ವೈಶಾಖ್ 1997ರ ಜನವರಿ 31ರಂದು ಬೆಂಗಳೂರಿನಲ್ಲಿ ಜನಿಸಿದರು.
2021ರ ಫೆಬ್ರವರಿ 24ರಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ತಮ್ಮ ಚೊಚ್ಚಲ ಲಿಸ್ಟ್ ಎ ಪಂದ್ಯ ಆಡಿದರು. ಸರ್ವೀಸಸ್ ತಂಡದ ವಿರುದ್ಧ ಆಡಿದ ಮೊದಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ, 25 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಪಡೆದು ಮಿಂಚಿದ್ದರು. 2022ರ ಫೆಬ್ರವರಿ 17ರಂದು ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.
ಈಗಾಗಲೇ ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಡಿದ ಅನುಭವ ವೈಶಾಖ್ ವಿಜಯ್‌ಗಿದೆ. ಇದುವರೆಗ ಆಡಿದ 10 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅವರು 38 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಇದೇ ವೇಳೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ದೇಶಿಯ ಮಟ್ಟದಲ್ಲಿ 14 ಟಿ20 ಪಂದ್ಯಗಳನ್ನು ಆಡಿದ ಅನುಭವವಿರುವ ಯುವ ವೇಗಿ, 22 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೈಶಾಖ್ 10 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ್ದರು. ಆ ಮೂಲಕ ಪಂದ್ಯಾವಳಿಯಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 6.31ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ, ತಾವು ಹೆಚ್ಚು ರನ್ ಸೋರಿಕೆಯಾಗಲು ಅವಕಾಶ ಕೊಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದರು.