ಮೇಘಾಲಯ ತಂಡದ ಆಟಗಾರ ಆಕಾಶ್ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ ಪ್ಲೇಟ್ ಪಂದ್ಯದಲ್ಲಿ ಮೇಘಾಲಯ ಮತ್ತು ಅರುಣಾಚಲ ತಂಡಗಳು ಮುಖಾಮುಖಿಯಾಗಿದ್ದವು.
ಸೂರತ್ನಲ್ಲಿ ನಡೆದ ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಕಾಶ್ ಚೌಧರಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಆಕಾಶ್ ಚೌಧರಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ಆಟಗಾರ ವೇಯ್ನ್ ವೈಟ್ ಹೆಸರಿನಲ್ಲಿತ್ತು. ವೇಯ್ನ್ ವೈಟ್ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಆಕಾಶ್ ಚೌಧರಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ 2ನೇ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸಹ ಆಕಾಶ್ ಚೌಧರಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರವಿ ಶಾಸ್ತ್ರಿ (1985) ಈ ಸಾಧನೆ ಮಾಡಿದ್ದರು.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸಹ ಆಕಾಶ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ನ ಗ್ಯಾರಿ ಸೋಬರ್ಸ್ ಹಾಗೂ ರವಿ ಶಾಸ್ತ್ರಿ ಮಾತ್ರ ಈ ಸಾಧನೆ ಮಾಡಿದ್ದರು.
ಕ್ರಿಕೆಟ್ ಇತಿಹಾಸದಲ್ಲೇ ಸತತ 8 ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಕೂಡ ಆಕಾಶ್ ಚೌಧರಿ ಪಾಲಾಗಿದೆ. ಲಿಮರ್ ದಾಬಿ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಬಾರಿಸಿದ ಆಕಾಶ್ ಆ ಬಳಿಕ ಮರು ಓವರ್ನ ಮೊದಲೆರಡು ಎಸೆತಗಳಲ್ಲಿ ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಸತತ 8 ಸಿಕ್ಸ್ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
For More Updates Join our WhatsApp Group :



