ಕಲಬುರಗಿ : ಆಳಂದ ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿದೆ ಎಂಬ ಆರೋಪ ಸಂಬಂಧ ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಅಕ್ರಮಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲು ಡೇಟಾ ಸೆಂಟರ್ಗೆ ತಲಾ 80 ರೂಪಾಯಿಯಂತೆ ಪಾವತಿ ಮಾಡಲಾಗಿತ್ತು ಎಂಬುದು ಬೆಳಕಿಗೆ ಬಂದ ಬೆನ್ನಲ್ಲೇ ಮತ್ತಷ್ಟು ಸ್ಪೋಟಕ ವಿಚಾರಗಳು ಬಯಲಾಗಿವೆ. ಮತ ಕಳವು ಪ್ರಕರಣದ ಪ್ರಮುಖ ಸಂಚುಕೋರ ಮೊಹಮ್ಮದ್ ಅಶ್ಫಾಕ್ ಗ್ಯಾಂಗ್ ನೂರಕ್ಕೂ ಹೆಚ್ಚು ಸಿಮ್ ಕಾರ್ಡ್ ಖರೀದಿ ಮಾಡಿದ್ದಲ್ಲದೆ, ಆಳಂದ ಸುತ್ತಮುತ್ತಲಿನ ಕೋಳಿ ಫಾರಂ ಕೆಲಸಗಾರರ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡಿತ್ತು ಎಂಬುದು ತಿಳಿದು ಬಂದಿದೆ.
ನೂರಾರು ಸಿಮ್ ಕಾರ್ಡ್ ಖರೀದಿಸಿದ ಗ್ಯಾಂಗ್ ಅವುಗಳ ನಂಬರ್ ಕೊಟ್ಟು ಮತದಾರರ ಹೆಸರು ಡಿಲೀಟ್ ಮಾಡಲು ಅರ್ಜಿ ಸಲ್ಲಿಕೆ ಮಾಡಿತ್ತು. ಅಲ್ಲದೆ, ಕೋಳಿ ಫಾರಂ ಕೆಲಸಗಾರರ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಿತ್ತು.
ಮತದಾರರ ಹೆಸರು ಡಿಲೀಟ್ಗೆ ಕೋಳಿಫಾರಂ ಕೆಲಸಗಾರರ ಮೊಬೈಲ್ ನಂಬರೇ ಯಾಕೆ?
ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಮಾಡಲು ಅರ್ಜಿ ಸಲ್ಲಿಸಬೇಕಿದ್ದರೆ ಅರ್ಜಿ ಸಲ್ಲಿಸಿದ ವ್ಯಕ್ತಿ ಕೂಡ ಅದೇ ಕ್ಷೇತ್ರದವನಾಗಿರಬೇಕು ಎಂಬ ನಿಯಮವಿದೆ. ಹೀಗಾಗಿ ಕೋಳಿ ಫಾರಂ ಕೆಲಸಗಾರರ ಮೊಬೈಲ್ ನಂಬರ್ ದುರ್ಬಳಕೆ ಮಾಡಲಾಗಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಆಳಂದ ಮತ ಕಳವು ಪ್ರಕರಣ: ಇಪ್ಪತ್ತಕ್ಕೂ ಹೆಚ್ಚು ಮಂದಿಯ ವಿಚಾರಣೆ
ಮೊಹಮ್ಮದ್ ಅಶ್ಫಾಕ್ ನೇತೃತ್ವದಲ್ಲಿಯೇ ಇಡೀ ಮತಕಳವು ಪ್ರಕರಣ ನಡೆದಿತ್ತು ಎನ್ನಲಾಗಿದೆ. ಈ ಸಂಬಂಧ ಎಸ್ಐಟಿ ಇದೀಗ ಇಪ್ಪತ್ತಕ್ಕೂ ಹೆಚ್ಚು ಮಂದಿಯ ವಿಚಾರಣೆ ಮಾಡಿದೆ. ಸದ್ಯ ದುಬೈಯಲ್ಲಿರುವ ಅಶ್ಫಾಕ್ ಸೇರಿ ಆರು ಜನರನ್ನು ಎಸ್ಐಟಿ ಬಂಧಿಸುವ ಸಾಧ್ಯತೆ ದಟ್ಟವಾಗಿದೆ. ಅಶ್ಪಾಕ್ಗೆ ಡೀಲ್ ನೀಡಿದ್ದು ಯಾರು ಎಂಬುದರ ಬಗ್ಗೆ ಸದ್ಯ ಎಸ್ಐಟಿ ಮಾಹಿತಿ ಕಲೆ ಹಾಕುತ್ತಿದೆ.
ಏತನ್ಮಧ್ಯೆ, ಆಳಂದ ಮತ ಕಳವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದು, 2022 ರ ಫೆಬ್ರವರಿ ಮತ್ತು 2023 ರ ಫೆಬ್ರವರಿ ನಡುವೆ ಆಳಂದ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಲು ಬಳಸಲಾಗಿದೆ ಎಂದು ವರದಿಯಾಗಿರುವ ಪೋರ್ಟಲ್ಗಳು, ಐಪಿ ಅಡ್ರೆಸ್ ಮತ್ತು OTP ಟ್ರೇಲ್‌ಗಳಂತಹ ವಿವರಗಳನ್ನು ಕೋರಿದೆ ಎಂಬುದಾಗಿ ಮೂಲವೊಂದು ತಿಳಿಸಿದೆ.
For More Updates Join our WhatsApp Group :
