ಮೂವರಿಗೆ ಸಿಎಂ ಆಗುವ ಆಸೆ ಇದೆ’ ಎಂದ ಡಿ.ಕೆ.ಸುರೇಶ್

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಾಗಿ ಮಾತನಾಡಿರುವ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳೆಲ್ಲ ವ್ಯರ್ಥ. ಮುಖ್ಯಮಂತ್ರಿ ಆಗಬೇಕೆಂಬ ಆಸೆ ಕೆಲವರಿಗೆ ಇರಬಹುದು. ಆದರೆ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ.

ಐದು ವರ್ಷವೂ ಅವರೇ ಸಿಎಂ ಆಗಿರುತ್ತಾರೆ. ನಮ್ಮ ಹೈಕಮಾಂಡ್ ಕೂಡ ಇದನ್ನು ಸ್ಪಷ್ಟಪಡಿಸಿದೆ ಎಂದಿದ್ದಾರೆ.

ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷ ಹಾಗೂ ಎಲ್ಲ ಶಾಸಕರು ಬೆಂಬಲಕ್ಕೆ ನಿಂತಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡುವುದಾಗಿ ಹೇಳಿದೆ. ಆದರೆ, ಬಿಜೆಪಿಯವರು ನಮ್ಮ ಸರ್ಕಾರವನ್ನು ಬೀಳಿಸಲು ಹುನ್ನಾರ ನಡೆಸುತ್ತಲೇ ಇದ್ದಾರೆ. ಇದರ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಮೂವರು ಹಿರಿಯ ನಾಯಕರಿಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇರಬಹುದು. ಆದರೆ, ಖಾಲಿ ಇಲ್ಲದ ಕುರ್ಚಿಗೆ ಫೈಟ್ ಮಾಡುವುದು ಒಳ್ಳೆಯದಲ್ಲ. ಎಲ್ಲ ಶಾಸಕರ ಅಭಿಪ್ರಾಯದ ಮೇರೆಗೆ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲೂ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲುವುದಾಗಿ ಹೈಕಮಾಂಡ್ ಸ್ಪಷ್ಟಪಡಿಸಿದೆ ಎಂದಿದ್ದಾರೆ.

ರಾಜಕಾರಣದಲ್ಲಿ ಗೊಂದಲಗಳಿಂದಲೇ ನಾಯಕರಾಗಬೇಕು ಎನ್ನುವ ಆಸೆ ಕೆಲವರಿಗೆ ಇರುತ್ತದೆ. ಇನ್ನೂ ಕೆಲವರು ರಾಜಕಾರಣದಲ್ಲಿ ಗೊಂದಲ ಸೃಷ್ಟಿಸಲೇಬೇಕು ಎಂದು ಇರುತ್ತಾರೆ. ಆದರೆ ಕೆಲಸ ಮಾಡಿ ನಾಯಕರಾಗಬೇಕು ಎಂಬ ಮನಸ್ಥಿತಿ ಇರಲ್ಲ ಎಂದೂ ಸಿಎಂ ಆಗಬೇಕು ಎಂದು ಇಂಗಿತ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಕುರಿತಾಗಿ ಮಾತನಾಡಿ, ನಮಗೆ ಯೋಗೇಶ್ವರ್ ಅವರ ಅವಶ್ಯಕತೆಯೇ ಇಲ್ಲ. ನಾವು ಏಕೆ ಯೋಗೇಶ್ವರ್ ಅವರಿಗೆ ಮಣೆ ಹಾಕಬೇಕು? ಎಂದು ಹೇಳಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗಾಗಿ ನಾವು ಈಗಾಗಲೇ ತಂತ್ರಗಾರಿಕೆ ರೂಪಿಸಿದ್ದೇವೆ. ನಮ್ಮ ಕಾರ್ಯಕರ್ತರು ಕೂಡ ಗೆಲುವಿನ ಉತ್ಸಾಹದಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಆಗ “ಅಚ್ಚರಿಯ ಅಭ್ಯರ್ಥಿ” ಯಾರು ಎಂದು ಎಲ್ಲರಿಗೂ ತಿಳಿಯಲಿದೆ ಎಂದು ಗುಟ್ಟು ಉಳಿಸಿಕೊಂಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಅಖಾಡ ಇಡೀ ರಾಜ್ಯದ ಗಮನ ಸೆಳೆದಿದೆ. ಎಚ್.ಡಿ.ಕುಮಾರಸ್ವಾಮಿ ಅವರಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಇದೀಗ ಪಕ್ಷಗಳ ನಡುವೆ ಭಾರಿ ಫೈಟ್ ಕೂಡ ಶುರುವಾಗಿದೆ. ಒಂದೆಡೆ ಎನ್ಡಿಎ ಜೊತೆಗಿನ ಜೆಡಿಎಸ್ ಮೈತ್ರಿಯೂ ಈ ಚುನಾವಣೆಗೆ ತಲೆನೋವು ತಂದಿಟ್ಟಿದೆ. ಬಿಜೆಪಿಯ ಸಿ.ಪಿ.ಯೋಗೇಶ್ವರ್ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದೆ. ಆದರೆ ಜೆಡಿಎಸ್ನಿಂದಲೂ ಅಭ್ಯರ್ಥಿ ನಿಲ್ಲಿಸುವ ಹಂಬಲದಲ್ಲಿದ್ದಾರೆ. ಕಾಂಗ್ರೆಸ್ನಿಂದ ಇಲ್ಲಿಗೆ ಅಭ್ಯರ್ಥಿ ಯಾರು ಎನ್ನುವುದು ಈವರೆಗೆ ನಿರ್ಧಾರವೇ ಆಗಿಲ್ಲ. ಬಿಜೆಪಿ ಹೈಕಮಾಂಡ್ ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿಯನ್ನು ನಿರ್ಧರಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಟ್ಟಿದೆ ಎಂದು ಹೇಳಲಾಗಿದೆ. ಬಿಜೆಪಿ ಹೈಕಮಾಂಡ್ನ ಈ ನಿರ್ಧಾರ ಮೈತ್ರಿ ಪಕ್ಷ ಜೆಡಿಎಸ್ಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಹೀಗಾಗಿ ಕುಮಾರಸ್ವಾಮಿಯವರು ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *