ಮಸಾಜ್ ವೇಳೆ ಥೆರಪಿಸ್ಟ್ ಅಸಭ್ಯ ನಡೆ | ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು.
ಬೆಂಗಳೂರು: ಕೆನಡಾದ ಮಹಿಳೆಯೊಬ್ಬರ ಜೊತೆ ನಗರದ ಖಾಸಗಿ ಹೋಟೆಲ್‌ನ ಸ್ಪಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದು, ಮಸಾಜ್ ಸಮಯದಲ್ಲಿ ಥೆರಪಿಸ್ಟ್ ಅಸಮಂಜಸವಾಗಿ ವರ್ತಿಸಿದ್ದಾನೆ. ತಾನು ಅರೆನಗ್ನ ಸ್ಥಿತಿಯಲ್ಲಿದ್ದಾಗಲೇ ಕೊಠಡಿಯ ಬಾಗಿಲು ತೆರೆದಿದ್ದರಿಂದ ತೀವ್ರ ಅವಮಾನ ಮತ್ತು ಮಾನಸಿಕ ಪೀಡನೆ ಅನುಭವಿಸಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಘಟನೆ ನಡೆದಿದೆ.
ಘಟನೆ ಬಗ್ಗೆ ದೂರಿದರೂ ನಿರ್ಲಕ್ಷ್ಯ ಆರೋಪ
ಇನ್ನು ನಡೆದ ಘಟನೆಯ ಬಗ್ಗೆ ತಕ್ಷಣವೇ ಮಹಿಳೆ ಹೋಟೆಲ್ ಆಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ ಅವರ ದೂರನ್ನು ಹೋಟೆಲ್ ಗಂಭೀರವಾಗಿ ಪರಿಗಣಿಸಲಾಗಿಲ್ಲ. ಬದಲಾಗಿ 7000 ರೂಪಾಯಿ ಮಸಾಜ್ ಶುಲ್ಕದ ಹಣವನ್ನ ಮರುಪಾವತಿ ಮಾಡಿ, ವಿಷಯವನ್ನು ಮುಂದುವರಿಸದಂತೆ ಸಲಹೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಹೋಟೆಲ್ ಆಡಳಿತದಿಂದ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದ ಮಹಿಳೆ ನಿರಾಸೆಗೊಂಡ ಬಳಿಕ ಘಟನೆ ಬಗ್ಗೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಥೆರಪಿಸ್ಟ್ ಮತ್ತು ಇತರ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರೋದಾಗಿ ಟೈಮ್ಸ್ ನೌ ವರದಿ ಮಾಡಿದೆ.
For More Updates Join our WhatsApp Group :




