ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಕಾನೂನುಬದ್ಧವಾಗಿದ್ದು, ಇದರಲ್ಲಿ ನನ್ನ ಹಾಗೂ ನನ್ನ ಪತ್ನಿ ಪಾತ್ರ ಇಲ್ಲ. ಬಿಜೆಪಿ-ಜೆಡಿಎಸ್ ರಾಜಕಾರಣಕ್ಕೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಇಂದು ವಿಧಾನಸೌಧದಲ್ಲಿ ದಾಖಲೆ ಸಮೇತವಾಗಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಸಿಎಂ, ಬಿಜೆಪಿ-ಜೆಡಿಎಸ್ ರಾಜಕೀಯವಾಗಿ ಹತಾಶರಾಗಿದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಾರೆ. ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ಸಹಿಸಲು ಆಗುತ್ತಿಲ್ಲ. ಕಲಾಪದ ಎರಡು ವಾರಗಳು ಒಂದೇ ವಿಚಾರ ಪ್ರಸ್ತಾಪವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ವಿಚಾರ ಬಿಟ್ಟರೆ ರಾಜ್ಯದ ಸಮಸ್ಯೆ ಬಗ್ಗೆ ಚಕಾರ ಎತ್ತಿಲ್ಲ. ಪ್ರವಾಹದ ಬಗ್ಗೆ ವಿಪಕ್ಷಗಳು ಯಾರೂ ಮಾತನಾಡಿಲ್ಲ. ಇದನ್ನೆಲ್ಲಾ ನೋಡಿದರೆ ಸಿಎಂ, ರಾಜ್ಯ ಸರ್ಕಾರಕ್ಕೆ ಮಸಿ ಬಳಿಯಬೇಕು ಎಂಬ ಉದ್ದೇಶ ಇದೆ ಅನ್ನಿಸುತ್ತೆ. ಇದು ಕಾನೂನುಬದ್ಧವಾಗಿದೆ. ಬಿಜೆಪಿ-ಜೆಡಿಎಸ್ ರಾಜಕಾರಣಕ್ಕೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನ. ಬಿಜೆಪಿ-ಜೆಡಿಎಸ್ ಗೆ ಎರಡನೇ ಸರಿ ಸಿಎಂ ಆಗುವುದನ್ನು ಸಹಿಸಲು ಆಗುತ್ತಿಲ್ಲ ಎಂದರು.
ಶಾಸಕನಾಗಿ, ಮಂತ್ರಿಯಾಗಿ, ಸಿಎಂ ಆಗಿ ಸುಮಾರು 40 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ಇಂದಿನವರೆಗೆ ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಬಿಜೆಪಿ-ಜೆಡಿಎಸ್ ದ್ವೇಷದಿಂದ, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅವರು ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿದರೂ ಹೆಚ್ಚು ಸ್ಥಾನ ಗೆಲ್ಲಲು ಆಗಿಲ್ಲ. ಜನರ ವಿಶ್ವಾಸ ಗಳಿಸಲು ಅವರು ವಾಮಮಾರ್ಗ ಬಳಸುತ್ತಿದ್ದಾರೆ ಎಂದು ಟೀಕಿಸಿದರು.
2-8-1935ರಲ್ಲಿ ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲೂಕು ಕಚೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು 15-8-1935 ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲು ಕ್ರಮವಹಿಸಿದ್ದಾರೆ. 26-9-1935 ರಂದು ಹರಾಜು ನೋಟೀಸು ಹೊರಡಿಸಿದ್ದಾರೆ. 3-10-1935 ರಂದು ಹರಾಜು ನಡೆಸಲಾಗುವುದೆಂದು ನೋಟೀಸಿನಲ್ಲಿ ತಿಳಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲಾಗಿದೆ. ಹರಾಜು ನಡೆಸಿದ ಮೇಲೆ ಈ ರೀತಿ ದಾಖಲು ಮಾಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ. 464ರ 3.16 ಜಮೀನನ್ನು ಹರಾಜು ಮಾಡಿಸಲಾಯ್ತು. 1 ರೂಪಾಯಿಗೆ ನಿಂಗ ಬಿನ್ ಜವರಗೆ ಹರಾಜು ಮಾಡಲಾಯ್ತು ಎಂದು ತಿಳಿಸಿದರು.