ಅಮರಾವತಿ: ಇಲ್ಲಿನ ಪಲ್ನಾಡು ಜಿಲ್ಲೆಯ ನರಸರಾವ್ಪೇಟೆಯ ಎರಡು ವರ್ಷದ ಹೆಣ್ಣು ಮಗುವೊಂದು ಹಕ್ಕಿ ಜ್ವರದಿಂದ (H5N1 ಇನ್ಫ್ಲುಯೆಂನ್ಸ ವೈರಸ್) ಸಾವನ್ನಪ್ಪಿದೆ. ಆಂಧ್ರಪ್ರದೇಶದಲ್ಲಿ H5N1 ಸೋಂಕಿನಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.

ವರದಿಗಳ ಪ್ರಕಾರ, ಮಗು ಹಸಿ ಕೋಳಿ ಮಾಂಸವನ್ನು ಸೇವಿಸಿದೆ ಎಂದು ಹೇಳಲಾಗಿದೆ. ಮಗುವು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವುದರಿಂದ ಹಕ್ಕಿ ಜ್ವರ ಸೋಂಕು ಉಲ್ಭಣಗೊಂಡಿದೆ ಎಂದು ಶಂಕಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ಸಾವಿಗೆ ಕಾರಣವನ್ನು ಗುರುವಾರ ಅಧಿಕೃತವಾಗಿ ದೃಢಪಡಿಸಿದ್ದು, ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಮಗುವಿಗೆ ಮಾರ್ಚ್ 4ರಂದು ಜ್ವರ, ಉಸಿರಾಟದ ತೊಂದರೆ ಮತ್ತು ಇತರ ರೋಗಲಕ್ಷಣಗಳು ಕಂಡುಬಂದಿದ್ದು, ಮಂಗಳಗಿರಿಯ AIIMS ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಮಾರ್ಚ್ 16ರಂದು ಮಗು ಸಾವನ್ನಪ್ಪಿದೆ. ಆರೋಗ್ಯ ಅಧಿಕಾರಿಗಳು ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ಪರೀಕ್ಷೆ ನಡೆಸಿದ ಬಳಿಕ H5N1 ವೈರಸ್ ತಗುಲಿರುವುದು ದೃಢಪಟ್ಟಿದೆ. ಹಕ್ಕಿ ಜ್ವರದಿಂದ ಮಾನವ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ.
ಕೇಂದ್ರ ತಜ್ಞರ ತಂಡ ಭೇಟಿ: ಪ್ರಕರಣದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಯಾರೂ ಕೂಡ ಭಯಪಡದಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ಪರಿಶೀಲನೆ ಮತ್ತು ವೈದ್ಯರೊಂದಿಗೆ ಚರ್ಚೆ ನಡೆಸಲು ದೆಹಲಿಯಿಂದ ಕೇಂದ್ರ ತಜ್ಞರ ತಂಡವು ಮಂಗಳಗಿರಿಗೆ ಏಮ್ಸ್ಗೆ ಭೇಟಿ ನೀಡಿದೆ. ತಂಡವು ಗುಂಟೂರಿನ ವಿಆರ್ಡಿಎಲ್ ಪ್ರಯೋಗಾಲಯದಲ್ಲೂ ಸಹ ಪರಿಶೀಲಿಸಲಿದ್ದು, ನರಸರಾವ್ಪೇಟೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ.
ಹಸಿ ಕೋಳಿ ಮಾಂಸ ಸೇವಿಸಿದ್ದ ಮಗು: ಆರೋಗ್ಯ ಅಧಿಕಾರಿಗಳು ಮಗುವಿನ ಕುಟುಂಬ ಸದಸ್ಯರನ್ನು ವಿಚಾರಿಸಿದಾಗ, ಮಗಳು ಸಾಕುಪ್ರಾಣಿಗಳು ಮತ್ತು ಬೀದಿ ನಾಯಿಗಳೊಂದಿಗೆ ಆಟವಾಡುತ್ತಿದ್ದಳು. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಎರಡು ದಿನಗಳ ಮೊದಲು ಹಸಿ ಕೋಳಿ ಮಾಂಸವನ್ನು ಸೇವಿಸಿದ್ದಳು ಎಂದು ಮಗುವಿನ ತಾಯಿ ಬಹಿರಂಗಪಡಿಸಿದ್ದಾರೆ. ಪಶುಸಂಗೋಪನಾ ಅಧಿಕಾರಿಗಳು ಹೇಳುವಂತೆ, ಪಲ್ನಾಡು ಜಿಲ್ಲೆಯಲ್ಲಿ ಹಕ್ಕಿ ಜ್ವರ ಹರಡಿರುವುದು ಕಂಡುಬಂದಿಲ್ಲ. ಸಂಭವನೀಯ ಪ್ರಕರಣಗಳ ಪತ್ತೆಗೆ ಮೃತ ಮಗುವಿನ ನಿವಾಸದ ಸುತ್ತಮುತ್ತ ಜ್ವರ ಸಮೀಕ್ಷೆ ನಡೆಸಲಾಯಿತು. ಆದರೆ, ಯಾವುದೇ ಹೆಚ್ಚುವರಿ ಪ್ರಕರಣಗಳು ವರದಿಯಾಗಿಲ್ಲ. ತನಿಖೆಯ ಭಾಗವಾಗಿ, ಅಧಿಕಾರಿಗಳು ಹತ್ತಿರದ ಮಾಂಸದ ಅಂಗಡಿಯನ್ನು ಪರಿಶೀಲಿಸಿದ್ದು, ಅಲ್ಲಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.