ಅಮರಾವತಿ: ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಕಡಿಮೆ ಸಮಯದಲ್ಲಿ ದರ್ಶನ ಸಿಗಬೇಕು ಎನ್ನುವ ಉದ್ದೇಶದಿಂದ ಎಐ (AI) ಆಧಾರಿತ ಸೌಲಭ್ಯ ತರಲು ದೇವಸ್ಥಾನದ ಆಡಳಿತ ಮಂಡಳಿ ಗೂಗಲ್ ಇಂಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ವಿಶ್ವದ ಮೊದಲ ಹಿಂದೂ ದೇವಸ್ಥಾನವೆಂಬ ಖ್ಯಾತಿಗೆ ಟಿಟಿಡಿ ಪಾತ್ರವಾಗಲಿದೆ.

ಸೋಮವಾರ ತಿರುಮಲದಲ್ಲಿ ನಡೆದ ಟಿಟಿಡಿ ಟ್ರಸ್ಟ್ ಮಂಡಳಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಮಾತನಾಡಿ, ಈ ಒಪ್ಪಂದದ ಮೂಲಕ ಆಕರ್ಷಕ ಕೃತಕ ಬುದ್ಧಿಮತ್ತೆ ಸಂಯೋಜಿತ ಯಾತ್ರಾ ಸೇವೆಗಳನ್ನು ತರಲು ಆಡಳಿತ ಮಂಡಳಿ ನಿರ್ಧರಿಸಿದೆ. ಜೊತೆಗೆ ಭಕ್ತರಿಗೆ ತೊಂದರೆಯಾಗದಂತೆ ಯಾತ್ರೆ ಕೈಗೊಳ್ಳಲು ತಿರುಮಲದಲ್ಲಿ ಎಐ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಈ ವೇಳೆ ಟಿಟಿಡಿ ಇಒ ಜೆ.ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಇಒ ಸಿಎಚ್ ವೆಂಕಯ್ಯ ಚೌಧರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಿಟಿಡಿ ಮತ್ತು ಗೂಗಲ್ ನಡುವಿನ ಈ ಒಪ್ಪಂದದ ಪ್ರಮುಖ ಅಂಶವೆಂದರೆ ತಿಮ್ಮಪ್ಪನ ಉಚಿತ ದರ್ಶನಕ್ಕಾಗಿ ಭಕ್ತರು ಕಾಯುಬೇಕಾಗುವ ಸಮಯದಲ್ಲಿ ಇಳಿಕೆಯಾಗಲಿದೆ. ತಿರುಪತಿ ಟ್ರಸ್ಟ್ ಅಲಿಪಿರಿ ಬಳಿಯ ಮುಮ್ತಾಜ್ ಹೋಟೆಲ್ ಮತ್ತು ದೇವಲೋಕ್ ಯೋಜನೆಗಳಿಗೆ ಹಂಚಿಕೆಯಾದ 35 ಎಕರೆ ಭೂಮಿಯನ್ನು ಪಡೆಯಲು ನಿರ್ಧರಿಸಿದೆ. ಮುಮ್ತಾಜ್ ಸಮೂಹದ ಹೋಟೆಲ್‌ಗಳಿಗೆ ಹಂಚಿಕೆಯಾದ ಸ್ಥಳದ ಪಕ್ಕದಲ್ಲಿರುವ ಎಪಿ ಪ್ರವಾಸೋದ್ಯಮಕ್ಕೆ ಸೇರಿದ 15 ಎಕರೆ ಭೂಮಿಯನ್ನು ಕೂಡ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸೂಚನೆಗಳನ್ನು ಅನುಸರಿಸಿ, ತಿರುಮಲ ಬೆಟ್ಟಗಳ ಪಾವಿತ್ರ‍್ಯವನ್ನು ಕಾಪಾಡಲು ಮೃಗಾಲಯ ಪಾರ್ಕ್ ರಸ್ತೆ ಮತ್ತು ಕಪಿಲತೀರ್ಥಂ ಪ್ರದೇಶದ ನಡುವೆ ಯಾವುದೇ ನಿರ್ಮಾಣ ಚಟುವಟಿಕೆಯನ್ನು ನಿಷೇಧಿಸುವ ಜವಾಬ್ದಾರಿಯನ್ನು ಟಿಟಿಡಿ ವಹಿಸಿಕೊಳ್ಳಲಿದೆ. ಅದೇ ರೀತಿ, ತಿರುಪತಿಯಲ್ಲಿ ಸೈನ್ಸ್ ಸಿಟಿ ಯೋಜನೆಗೆ ಹಂಚಿಕೆಯಾದ 20 ಎಕರೆ ಭೂಮಿಯನ್ನು ಟ್ರಸ್ಟ್ ಮರಳಿ ಪಡೆಯಲು ನಿರ್ಧರಿಸಿದೆ. ತಿರುಪತಿ ಟ್ರಸ್ಟ್ ಹೊಸ ಟ್ರಸ್ಟ್ ಸ್ಥಾಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲಿದ್ದು, ಜೊತೆಗೆ ಶ್ರೀವಾಣಿ ಟ್ರಸ್ಟ್ನ 1,400 ಕೋಟಿ ರೂ.ಗಳಷ್ಟು ವಿಲೀನಗೊಳಿಸಲು ನಿರ್ಧರಿಸಿದೆ. ಸ್ಥಾಪನೆಯಾಗಲಿರುವ ಹೊಸ ಟ್ರಸ್ಟ್‌ಗೆ ಭಾರತ ಮತ್ತು ವಿದೇಶಗಳಲ್ಲಿ ಹೊಸ ದೇವಾಲಯಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ವಹಿಸಲಾಗುವುದು ಎಂದು ತಿಳಿಸಿದರು.