ಅನಂತನಾಗ್ : ಬಿಗಿ ಭದ್ರತೆಯ ನಡುವೆ ಅಮರನಾಥ ಯಾತ್ರೆಯು ಪಹಲ್ಗಾಮ್ ಮತ್ತು ಬಲ್ತಾಲ್ ಎರಡೂ ಮಾರ್ಗಗಳಲ್ಲಿ ಶಾಂತಿಯುತವಾಗಿ ಮುಂದುವರೆದಿದೆ. ಕಳೆದ 14 ದಿನಗಳಲ್ಲಿ 2.80 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹಾಂತರ ದೇವಾಲಯದಲ್ಲಿ ಬಾಬಾ ಬರ್ಫಾನಿಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶನಿವಾರ 4,669 ಪ್ರಯಾಣಿಕರ ಮತ್ತೊಂದು ಬ್ಯಾಚ್ ಕಣಿವೆಗೆ ತೆರಳಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಶ್ರೀ ಅಮರನಾಥ್ ದೇಗುಲ ಮಂಡಳಿಯ ಅಧಿಕಾರಿಗಳು, ಜೂನ್ 29 ರಂದು ಪ್ರಾರಂಭವಾದಾಗಿನಿಂದ 2.80 ಲಕ್ಷಕ್ಕೂ ಹೆಚ್ಚು ಭಕ್ತರು ಯಾತ್ರೆಯನ್ನು ಕೈಗೊಂಡಿದ್ದಾರೆ. ಶನಿವಾರ, ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಭದ್ರತಾ ಬೆಂಗಾವಲುಗಳಲ್ಲಿ 4,669 ಯಾತ್ರಾರ್ಥಿಗಳ ಮತ್ತೊಂದು ತಂಡವು ಕಣಿವೆಗೆ ತೆರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಗಿ ಭದ್ರತೆ ನಡುವೆ ಪ್ರಯಾಣ: ಈ ಪೈಕಿ 1,630 ಯಾತ್ರಾರ್ಥಿಗಳು 74 ವಾಹನಗಳ ಭದ್ರತಾ ಬೆಂಗಾವಲು ಪಡೆಯಲ್ಲಿ ಉತ್ತರ ಕಾಶ್ಮೀರದ ಬಲ್ತಾಲ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದು, ಅವರು ಮುಂಜಾನೆ 3:05 ಕ್ಕೆ ಜಮ್ಮುವಿನಿಂದ ಹೊರಟರು. 3,039 ಪ್ರಯಾಣಿಕರ ಮತ್ತೊಂದು ಗುಂಪು ದಕ್ಷಿಣ ಕಾಶ್ಮೀರದ ನುನ್ವಾನ್ ಬೇಸ್ ಕ್ಯಾಂಪ್‌ಗೆ ಬೆಳಗ್ಗೆ 3:57 ಕ್ಕೆ 109 ವಾಹನಗಳ ಬೆಂಗಾವಲು ಪಡೆಯ ಭದ್ರತೆಯೊಂದಿಗೆ ತೆರಳಿದೆ. ಈ ಗುಹೆಯು ಕಾಶ್ಮೀರ ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಭಕ್ತಾದಿಗಳು ಸಾಂಪ್ರದಾಯಿಕ ದಕ್ಷಿಣ ಕಾಶ್ಮೀರ ಪಹಲ್ಗಾಮ್ ಮಾರ್ಗದ ಮೂಲಕ ಅಥವಾ ಉತ್ತರ ಕಾಶ್ಮೀರ ಬಲ್ತಾಲ್ ಮಾರ್ಗದ ಮೂಲಕ ಗುಹಾ ದೇವಾಲಯವನ್ನು ತಲುಪುತ್ತಾರೆ.