ಅಮೆರಿಕ || ಹೆಲೆನ್ ಚಂಡಮಾರುತ ಅಬ್ಬರ : 600 ಮಂದಿ ನಾಪತ್ತೆ

ಅಮೆರಿಕ || ಹೆಲೆನ್ ಚಂಡಮಾರುತ ಅಬ್ಬರ : 600 ಮಂದಿ ನಾಪತ್ತೆ

ಫ್ಲೋರಿಡಾ(ಅಮೆರಿಕ): ಅಮೆರಿಕದ ಆಗ್ನೇಯ ದಿಕ್ಕಿನಲ್ಲಿ ಹೆಲೆನ್ ಚಂಡಮಾರುತದಿಂದಾಗಿ ಒಟ್ಟು 93 ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಹಲವು ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ ಎಂದು ವರದಿಯಾಗಿದೆ.

ದಕ್ಷಿಣ ಕೆರೊಲಿನಾ, ಜಾರ್ಜಿಯಾ, ಫ್ಲೋರಿಡಾ, ಉತ್ತರ ಕೆರೊಲಿನಾ, ವರ್ಜೀನಿಯಾ ಮತ್ತು ಟೆನ್ನೆಸ್ಸಿಯಲ್ಲಿ ಸಾವುಗಳು ಸಂಭವಿಸಿವೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಉತ್ತರ ಕೆರೊಲಿನಾದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ. ಸಲೂಡಾ ಕೌಂಟಿಯ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ದಕ್ಷಿಣ ಕೆರೊಲಿನಾದಲ್ಲಿ ಕನಿಷ್ಠ 25 ಮಂದಿ ಅಸುನೀಗಿದ್ದಾರೆ.

ಜಾರ್ಜಿಯಾದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಅಲಾಮೊದಲ್ಲಿ ಸುಂಟರಗಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಬ್ರಿಯಾನ್ ಕೆಂಪ್ ಅವರ ವಕ್ತಾರರು ತಿಳಿಸಿದ್ದಾರೆ. ಉತ್ತರ ಕೆರೊಲಿನಾದ ಬಂಕೊಂಬ್ ಕೌಂಟಿಯು ಆನ್ಲೈನ್ ಫಾರ್ಮ್ ಮೂಲಕ ಸುಮಾರು 600 ಕಾಣೆಯಾದ ಜನರ ಮಾಹಿತಿ ಪಡೆದಿದೆ ಎಂದು ಕೌಂಟಿ ಮ್ಯಾನೇಜರ್ ಅವ್ರಿಲ್ ಪಿಂಡರ್ ಭಾನುವಾರ ಹೇಳಿದರು.

ಚಂಡಮಾರುತ ಪೀಡಿತ ಸಮುದಾಯಗಳಿಗೆ ಅಗತ್ಯ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಆಡಳಿತ ವ್ಯವಸ್ಥೆ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *