ನಿಜ್ಜರ್ ಹತ್ಯೆ ಹಿಂದೆ ಅಮಿತ್ ಶಾ ಕೈವಾಡ ; ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಆರೋಪ

ನಿಜ್ಜರ್ ಹತ್ಯೆ ಹಿಂದೆ ಅಮಿತ್ ಶಾ ಕೈವಾಡ ; ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಆರೋಪ

ನವದೆಹಲಿ : ಭಾರತದ ಗೃಹ ಸಚಿವ ಅಮಿತ್ ಶಾ ಮೇಲೆ ಕೇಳಿ ಬಂದಿರುವ ಗಂಭೀರ ಆರೋಪ ಇದೀಗ ಸಾಕಷ್ಟು ಗೊಂದಲ ಮತ್ತು ವಿವಾದಗಳಿಗೆ ಕಾರಣವಾಗಿದೆ. ಅದರಲ್ಲೂ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಹೇಳಿಕೆ ನೀಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಹೌದು… ಕೆನಡಾ ನೆಲದಲ್ಲಿನ ಹತ್ಯೆ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿರುವುದನ್ನು ತಾನೇ ಖಚಿತಪಡಿಸಿ ವಾಷಿಂಗ್ಟನ್ ಪೋಸ್ಟ್ ಗೆ ಹೇಳಿಕೆ ನೀಡಿರುವುದಾಗಿ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಹೇಳಿದ್ದಾರೆ. ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ಕೆನಡಾದ ಸಂಸದೀಯ ಸಮಿತಿಯ ವಿಚಾರಣೆ ವೇಳೆ ಡೇವಿಡ್ ಮಾರಿಸನ್ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಭಾರತದ ಏಜಂಟರು ಕೆನಡಾದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ಧಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಅಕ್ಟೋಬರ್ 14ರಂದು ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಟ್ರುಡೊ, ಭಾರತದ ವಿರುದ್ದ ಸರಣಿ ಆರೋಪಗಳನ್ನು ಮಾಡಿದ್ದರು. ಭಾರತ ತನ್ನ ರಾಜತಾಂತ್ರಿಕರನ್ನು ಬಳಸಿಕೊಂಡು ಸಂಘಟಿತ ಅಪರಾಧಗಳ ಮೂಲಕ ಕೆನಡಾ ಪ್ರಜೆಗಳ ಮೇಲೆ ದಾಳಿ ಮಾಡುತ್ತಿದೆ. ಹಿಂಸಾಚಾರ ಮತ್ತು ಹತ್ಯೆಗಳ ಮೂಲಕ ಇಲ್ಲಿನ ಜನರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದರು.

ಅಮಿತ್ ಶಾ ಮತ್ತು ಭಾರತದ ವಿದೇಶಿ ಗುಪ್ತಚರ ಸಂಸ್ಥೆ RAW ದ ಹಿರಿಯ ಅಧಿಕಾರಿಗಳು ನಿಜ್ಜರ್ ಹತ್ಯೆಗೆ ಅನುಮತಿ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಈ ಹಿಂದೆ ವರದಿ ಮಾಡಿತ್ತು. ಅದಕ್ಕಿಂತ ಮುಂಚಿನ ವರದಿಯಲ್ಲಿ ವಾಷಿಂಗ್ಟನ್ ಪೋಸ್ಟ್ ಅಮಿತ್ ಶಾ ಹೆಸರನ್ನು ಉಲ್ಲೇಖಿಸಿರಲಿಲ್ಲ. ಭಾರತದ ಹಿರಿಯ ಸಚಿವರು ಮತ್ತು RAW ದ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾತ್ರ ಹೇಳಲಾಗಿತ್ತು.

ಆದರೆ ನಂತರ ಪರಿಷ್ಕರಿಸಿದ ವರದಿಯಲ್ಲಿ ಪತ್ರಿಕೆ ತನ್ನ ಮೂಲಗಳಿಂದ ಲಭ್ಯವಾದ ಹೆಚ್ಚು ವಿವರವಾದ ಮಾಹಿತಿ ಆಧಾರದ ಮೇಲೆ ಅಮಿತ್ ಶಾ ಹೆಸರನ್ನು ನೇರವಾಗಿ ಉಲ್ಲೇಖಿಸಿತ್ತು. ಈ ಬಗ್ಗೆ ಕೆನಡಾದ ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ಪ್ರಶ್ನೆಗಳನ್ನು ಕೇಳಲಾಯಿತು. ವಿಚಾರಣೆಯಲ್ಲಿ ಸಂಸತ್ತಿನ ಸದಸ್ಯರ ಮುಂದೆ ಇತರ ಹಿರಿಯ ಅಧಿಕಾರಿಗಳ ಜೊತೆ ಡೇವಿಡ್ ಮಾರಿಸನ್ ಅವರೂ ಸಾಕ್ಷ್ಯಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.

ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ಮೇಲೆ ನಡೆದ ವ್ಯಾಪಕ ಅಪರಾಧಗಳಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಎರಡು ವಾರಗಳ ಹಿಂದೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಆರೋಪಿಸಿದ್ದರ ಬಗ್ಗೆ ಸಮಿತಿಯಲ್ಲಿರುವ ಸಂಸದರು ಪ್ರಶ್ನೆಗಳನ್ನು ಕೇಳಿದರು. ಪತ್ರಕರ್ತರು ನನ್ನ ಬಳಿ ಅದೇ ವ್ಯಕ್ತಿಯಾ ಎಂದು ಕೇಳಿದ್ದರು. ಅದೇ ವ್ಯಕ್ತಿ ಎಂದು ನಾನು ದೃಢಪಡಿಸಿದ್ದೆ ಎಂದು ಸಮಿತಿಯೆದುರು ಡೇವಿಡ್ ಮಾರಿಸನ್ ಹೇಳಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ವಾಷಿಂಗ್ಟನ್ ಪೋಸ್ಟ್ ಜೊತೆಗೆ ಮಾಹಿತಿ ಹಂಚಿಕೊಂಡಿರುವ ಕೆನಡಾದ ನಿರ್ಧಾರದ ಬಗ್ಗೆ ಪ್ರಶ್ನೆ ಎದ್ದಿತು.

ಭಾರತೀಯ ಗೃಹ ವ್ಯವಹಾರಗಳ ಸಚಿವ ಕೆನಡಾ ನೆಲದಲ್ಲಿನ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಮಾಹಿತಿಯನ್ನು ಕೆನಡಾದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೂ ಅದು ವಾಷಿಂಗ್ಟನ್ ಪೋಸ್ಟ್ ನಲ್ಲಿ ಮಾತ್ರ ಹೇಗೆ ಬಹಿರಂಗಗೊಂಡಿತು ಎಂದು ಕೇಳಲಾಯಿತು. ಆ ಪ್ರಶ್ನೆಗೆ ಉತ್ತರಿಸಿದ ಮಾರಿಸನ್, ತಾನೇ ಹೇಳಿಕೆ ನೀಡಿದ್ದಾಗಿ ಸ್ಪಷ್ಟಪಡಿಸಿದರು.

ಭಾರತ ಸರ್ಕಾರದ ಏಜೆಂಟ್ರ ಮೂಲಕ ಕೆನಡಾದಲ್ಲಿ ಚುನಾವಣಾ ಹಸ್ತಕ್ಷೇಪ ಮತ್ತು ಕ್ರಿಮಿನಲ್ ಚಟುವಟಿಕೆಗಳು ನಡೆದಿರುವ ಬಗ್ಗೆಯೂ ಸಮಿತಿ ಸದಸ್ಯರು ಪ್ರಶ್ನೆಗಳನ್ನು ಕೇಳಿದರು. ಸಿಖ್ ಸಮುದಾಯದ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಟ್ರುಡೊ ಅವರ ರಾಜಕೀಯ ಅಜೆಂಡಾ ಇದಾಗಿದೆ ಎಂದು ಈಗಾಗಲೇ ಪ್ರತಿಪಾದಿಸಿರುವ ಭಾರತ, ಟ್ರುಡೋ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು ಹೇಳಿದೆ. ಡೇವಿಡ್ ಮಾರಿಸನ್ ಆರೋಪಕ್ಕೆ ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ.

Leave a Reply

Your email address will not be published. Required fields are marked *