ಊಟಗಳಲ್ಲಿ ಪಂಕ್ತಿ ಊಟವೇ ಲೇಸು

ಊಟಗಳಲ್ಲಿ ಪಂಕ್ತಿ ಊಟವೇ ಲೇಸು ಎಂಬ ಮಾತಿದೆ. ಬಂದ ಅತಿಥಿಗಳನ್ನು ಸಾಲಾಗಿ ಕೂರಿಸಿ, ಮಾಡಿದ ಅಡುಗೆಯನ್ನು ಒಂದೊAದಾಗಿ ತಂದು ಬಡಿಸಿ, ಅತಿಥಿ ದೇವೋ ಭವ ಎಂದು ಬಂದವರ ಹೊಟ್ಟೆಯನ್ನು ತಣಿಸುವ ಪದ್ಧತಿ ನನಗೆ ಅಚ್ಚುಮೆಚ್ಚು. ಕಾಲ ಬದಲಾದಂತೆ ಬಂದ ಬಫೆ ಪದ್ಧತಿ ಕೊಂಚ ರೇಜಿಗೆಯೆನಿಸಿದರೂ, ಅತಿಥಿಗಳ ಸಂಖ್ಯೆ ಹೆಚ್ಚಿದ್ದಾಗ, ಅವರನ್ನು ಸುಧಾರಿಸಲು ಅದುವೇ ಒಳ್ಳೆಯ ಪದ್ಧತಿ ಎಂದನಿಸುತ್ತದೆ.

ಏನು ಬೇಕೋ ಅದನ್ನು ನಾವೇ ಬಡಿಸಿಕೊಳ್ಳುವ ಅಥವಾ ಟೇಬಲ್ಲಿನ ಹಿಂದೆ ನಿಂತಿರುವರಿAದ ಬಡಿಸಿಕೊಳ್ಳುವ ವ್ಯವಸ್ಥೆ ಮೋಸ್ಟ್ ಎಫಿಷಿಯೆಂಟ್ ಕೂಡ ಹೌದು. ಪಂಕ್ತಿ ಸಾಲಿನ ರೂಪಾಂತರಿಯಾದ ಟೇಬಲ್ ವ್ಯವಸ್ಥೆ ಕೂಡ ಒಂದು ಲೆಕ್ಕದಲ್ಲಿ ಒಳ್ಳೆಯದೇ. ಮಕ್ಕಳು, ವಯಸ್ಸಾದವರು, ಮಂಡಿ ಸಮಸ್ಯೆಯಿರುವವರು ಯಾವುದೇ ಬೇಧ ಭಾವ ಇಲ್ಲದೆ ನಾವೆಲ್ಲರೂ ಒಂದೇ ಎಂದು ಒಟ್ಟಿಗೆ ಕೂತು ಊಟ ಮಾಡುವ ಕ್ರಮದಿಂದ ಊಟ ಬಡಿಸುವವರಿಗೂ ನೆಮ್ಮದಿ. ಜಾಸ್ತಿ ಬಗ್ಗಿ ಬೆನ್ನು ನೋವೇಳುವ ಚಾನ್ಸ್ ತುಂಬಾ ಕಮ್ಮಿ ನೋಡಿ, ಅದಕ್ಕೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ಸಭಾಂಗಣ ಸಣ್ಣದಿದ್ದು, ಅತಿಥಿಗಳು ಹೆಚ್ಚಿದ್ದಾಗಲೇ ಈ ಸಮಸ್ಯೆ ಕಂಡುಬರುವುದು.

ಇತ್ತೀಚಿಗೆ ಒಂದು ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಚ್ಚುಕಟ್ಟಾದ ಕಾರ್ಯಕ್ರಮ. ಸಭಾಂಗಣವೇನೂ ದೊಡ್ಡದಿರಲಿಲ್ಲ. ಐದುನೂರು ಅಥಿತಿಗಳನ್ನು ಆರಾಮಾಗಿ ಸುಧಾರಿಸಬಹುದಾಗಿತ್ತು. ಆದರೆ ಸುಮಾರು ಸಾವಿರ ಅತಿಥಿಗಳಿದ್ದರಿಂದ ಊಟದ ಹಾಲ್ ನಲ್ಲಿ ಅವರನ್ನು ಸುಧಾರಿಸುವುದು ಸಮಸ್ಯೆಯಾಗಿತ್ತು . ಹತ್ತಿರದವರ ಕಾರ್ಯಕ್ರಮ ಆಗಿದ್ದರಿಂದ ಅವರೇ ನಮಗೆ ಸೀಟು ಹಿಡಿದು ಕೂರಿಸಿದ್ದರು. ಒಳ್ಳೆಯ ಬಾಳೆ ಎಲೆ ಊಟ. ರುಚಿಯಾದ ಒಬ್ಬಟ್ಟು, ರುಮಾಲಿ ರೋಟಿ, ಪನೀರ್ ಕರಿ, ಬಾದುಷಾ..ಆಹಾ.. ಒಂದೊAದನ್ನೇ ಸವಿದುಕೊಂಡು ಕೂತಿರಬೇಕಾದರೆ ಹಿಂದೆ ಯಾರೋ ಬಂದು ನಿಂತAತಾಯ್ತು. ಒಂತರ ಇರಿಸು ಮುರುಸು. ಆದರೂ ಅತ್ತ ಗಮನ ಹರಿಸದೆ ನನ್ನ ಪಾಡಿಗೆ ತಿನ್ನುತ್ತಿದ್ದೆ.

ಅನ್ನ ಬಂತು, ಜೊತೆಗೆ ನುಗ್ಗೆ ಕಾಯಿ ಸಾಂಬಾರು. ಜೊತೆಗೆ ಬೆನ್ನ ಹಿಂದೆ ಗದ್ದಲವೂ ಹೆಚ್ಚಾಗುತ್ತಿತ್ತು. ಮೆಲ್ಲ ಹಿಂದುರಿಗಿ ನೋಡಿದರೆ, ಕೂತಿದ್ದವರ ಹಿಂದೆ ಜನರು, ನಮ್ಮ ನಂತರದ ಪಂಕ್ತಿಯಲ್ಲಿ ಕೂತು ಊಟ ಮಾಡಲು ಸಾಲುಗಟ್ಟಿ ನಿಂತಿದ್ದರು. ಅಲ್ಲಿಯ ತನಕ ನೆಮ್ಮದಿಯಿಂದ ಊಟ ಮಾಡುತ್ತಿದ್ದವನ ಮನಸು, ಕೂಡಲೇ ಗೊಂದಲದ ಗೂಡಾಗಿತ್ತು. ಯಾರೋ ನನ್ನನ್ನೇ ನೋಡುತ್ತಿದ್ದಂತೆ, ಬೇಗ ಊಟ ಮಾಡಿ ಏಳು ಎಂದು ಉಸುರಿದಂತೆ. ಆದರೂ ಮನಸು ಗಟ್ಟಿಯಾಗಿ, ‘ಯಾಕಿಷ್ಟು ಟೆನ್ಶನ್ ಮಾಡ್ಕೊತೀಯ, ನೀನೇನು ಕದ್ದು ತಿಂತ ಇದ್ದೀಯ?’ ಎಂದು ಅರಚಿಕೊಳ್ಳುತ್ತಾ ಧೈರ್ಯವನ್ನೂ ತುಂಬುತ್ತಿತ್ತು. ನಮ್ಮ ಮುಂದಿದ್ದ ಪಂಕ್ತಿಯ ಹಿಂದೆಯೂ ಜನರ ಸಾಲು. ಏನೇನೂ ಚರ್ಚಿಸುತ್ತಿದ್ದ ಅವರ ನೋಟ ಆಗೊಮ್ಮೆ ಈಗೊಮ್ಮೆ ಕೂತಿದ್ದವರ ಎಲೆಯ ಮೇಲೆ ಬೀಳುತ್ತಿತ್ತು. ಮುಖದಲ್ಲಿ ಕೊಂಚ ಅಸಮಾಧಾನ. ಇನ್ನೂ ಊಟ ಮಾಡ್ತವ್ನೆ ಎಂದು ಒಳಗೊಳಗೇ ಬೈದುಕೊಳ್ಳುತ್ತಿದ್ದರೇನೋ. ನನ್ನ ಬೆನ್ನ ಹಿಂದಿದ್ದವರೂ ಹಾಗೆಯೇ ಗೊಣಗಿಕೊಳ್ಳುತ್ತಿದ್ದರಬಹುದು.

ಅನ್ನ ಸಾಂಬಾರು ತಿನ್ನುವ ಅಲ್ಲಿಯ ತನಕ ಸುಮ್ಮನಿದ್ದ ಅತಿಥಿ ಮಹಾಶಯರ ಕಾಯುವ ತ್ರೆಶೋಲ್ಡ್, ಐಸ್ ಕ್ರೀಮ್ ಬಂದಾಗ ಮಿತಿ ಮೀರಿತ್ತು. ಶುರುವಾಯ್ತು ನೂಕಾಟ. ಬೆನ್ನ ಹಿಂದೆ ಯುದ್ಧವೇ ನಡೆಯುತ್ತಿದ್ದಂತೆ ರಂಪಾಟ. ಸೀಟಿಗಾಗಿ ಕಚ್ಚಾಟ. ಐಸ್ ಕ್ರೀಮ್ ತಿನ್ನಲು ಮನಸಾಗಲಿಲ್ಲ. ಒಳ್ಳೆಯ ಊಟ ಕೊಟ್ಟದ್ದಕ್ಕೆ ಅನ್ನಪೂರ್ಣೇಶ್ವರಿಗೆ ನಮಸ್ಕರಿಸುತ್ತಾ ಮೇಲೆದ್ದೆ. ಕ್ಷಣಾರ್ಧದಲ್ಲಿ ಆ ಸೀಟಿಗಾಗಿ ಮುಗಿಬಿದ್ದವರ ಅರಚಾಟ ಕಿವಿಗೆ ಬೀಳಲಾರಂಭಿಸಿತು. ನಾನು ಹಿಂದುರಿಗಿ ನೋಡಲಿಲ್ಲ. ಇನ್ನು ಮುಂದೆ ಇಂತಹ ಊಟಕ್ಕೆ ಹೋಗುವ ಮೊದಲು, ಛತ್ರದ ಬಗ್ಗೆ ಒಂದು ರಿಸರ್ಚ್ ಮಾಡಿಯೇ ಹೋಗಬೇಕೆಂದು ನಿರ್ಧರಿಸಿದ್ದೇನೆ. ಹಿಂದಿನ ಅನುಭವದಂತೆ ಜನರು ಬೆನ್ನ ಹಿಂದೆ ನಿಂತರೆ, ನೆಮ್ಮದಿಯಿಂದ ತಿನ್ನಲಂತೂ ಆಗುವುದಿಲ್ಲ. ಅಂತಹ ಪರಿಸ್ಥಿತಿ ನನಗೆ ಬಂದರೆ, ಊಟ ಮಾಡದೆ ಮನೆಗೆ ಮರಳುವ ಸಾಧ್ಯತೆಯೂ ಹೆಚ್ಚಿದೆ!

 – ಕಾರ್ತಿಕ್ ಕೃಷ್ಣ

Leave a Reply

Your email address will not be published. Required fields are marked *