ನಟಿಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ಕನ್ನಡ ಚಿತ್ರರಂಗದಲ್ಲಿಲ್ಲ : ತಾರಾ ಅನುರಾಧ

ಬೆಂಗಳೂರು: ”ಕನ್ನಡ ಚಿತ್ರರಂಗದಲ್ಲಿ ನಟಿಯರ ಮೇಲಿನ ಕಿರುಕುಳದಂತಹ ಪ್ರಕರಣಗಳು ಇಲ್ಲ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅದನ್ನು ಖಂಡಿಸುತ್ತೇವೆ. ಸಮಿತಿಯೊಂದು ರನಚೆಯಾಗಬೇಕು ಎಂದು ಕೆಲವರು ಸಿಎಂ ಬಳಿ ಹೋಗಿದ್ದಾರೆ. ವೈಯಕ್ತಿಕವಾಗಿ ನನಗೆ ಆ ರೀತಿಯ ಸಮಸ್ಯೆಗಳು ಎದುರಾಗಿಲ್ಲ. ನಾವೆಲ್ಲದರಲ್ಲೂ ಧ್ವನಿ ಎತ್ತುತ್ತೇವೆ, ಮುಂದೆ ಇರುತ್ತೇವೆ. ನಿಜ ಹೇಳಲೇ, ಗಂಡು ಮಕ್ಕಳು ಪಾಪ” ಎಂದು ನಟಿ ತಾರಾ ಅನುರಾಧ ತಿಳಿಸಿದರು.

ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಕರಾಳ ಮುಖವನ್ನು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಹಿರಂಗಪಡಿಸಿದೆ. ಅದಾದ ನಂತರ ನಮ್ಮಲ್ಲೂ ಒಂದು ಸಮಿತಿ ರಚನೆಯಾಗಬೇಕೆಂದು ಇತರ ಚಿತ್ರರಂಗಗಳು ಮುಂದೆ ಬರುತ್ತಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಫೈರ್ – ‘ಫಿಲ್ಮ್ ಇಂಡಸ್ಟ್ರಿ ಫಾರ್ ಈಕ್ವಾಲಿಟಿ’ಯ ಸದಸ್ಯರು ಸಮಿತಿಯೊಂದನ್ನು ರಚಿಸಬೇಕು ಎಂದು ನಿನ್ನೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಚಿತ್ರರಂಗದ ನಟ ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಹಿರಿಯ ನಟಿ ತಾರಾ ಅನುರಾಧ ಕೂಡಾ ಈ ಫೈರ್ ಕಮಿಟಿ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ”ಸಿನಿಮಾರಂಗ ಅಷ್ಟೇ ಅಲ್ಲ, ಪ್ರತೀ ಕ್ಷೇತ್ರದಲ್ಲೂ ಇಂತಹ ಸಮಸ್ಯೆ ಇರುತ್ತವೆ. ಇದರ ನಿವಾರಣೆಗೆ ರಾಜ್ಯ ಮಹಿಳಾ ಆಯೋಗ ಇದೆ. ಜೊತೆಗೆ ನಮ್ಮ ಮಾತೃಸಂಸ್ಥೆ ಫಿಲ್ಮ್ ಚೇಂಬರ್ ಇದೆ. ಕಲಾವಿದರ ಸಂಘ ಕೂಡಾ ಇದೆ. ಅಲ್ಲಿ ಏನಾದರೂ ದೂರು ಕೊಟ್ರೆ ನ್ಯಾಯ ಒದಗಿಸುತ್ತಾರೆ” ಎಂದು ತಿಳಿಸಿದರು.

ಇನ್ನೂ ‘ಫೈರ್’ ಕರ್ನಾಟಕ ಸರ್ಕಾರಕ್ಕೆ ಎರಡು ಬೇಡಿಕೆಗಳನ್ನು ಇಟ್ಟಿದೆ. ಮೊದಲನೆಯದು, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ವ್ಯವಸ್ಥಿತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಜೊತೆಗೆ, ಮಹಿಳೆಯರು ಕನ್ನಡ ಚಿತ್ರರಂಗದಲ್ಲಿ ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ತರುವಂತೆ ಕೇಳಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *